ದರೋಡೆ ಪ್ರಕರಣ: 12 ಗಂಟೆಯೊಳಗೆ ಆರೋಪಿಗಳ ಬಂಧನ

ಬೆಂಗಳೂರು, ಫೆ. 12: ಕತ್ರಿಗುಪ್ಪೆ ಹೊರವರ್ತುಲ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ನಿಂತಿದ್ದ ಸಾಫ್ಟ್‌ವೇರ್ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿ, ಬೆದರಿಸಿ ಮೊಬೈಲ್ ಕಸಿದು ಪರಾರಿಯಾಗಿದ್ದ ಐವರು ದರೋಡೆಕೋರರನ್ನು ಕೇವಲ 12ಗಂಟೆಯೊಳಗೆ ಬಂಧಿಸುವಲ್ಲಿ ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿದ್ದಾರೆ.
ಬಂಧಿತ ಆರೋಪಿಗಳನ್ನು ನಾಯಂಡಹಳ್ಳಿ, ಪಂತರಪಾಳ್ಯದ ಅಜಿತ್ ಯಾನೆ ಕುಳ್ಳ(19), ಶ್ಯಾಮ್(18), ರಘು(20), ಗಿರಿನಗರದ ಚಂದ್ರಶೇಖರ್(20), ದೀಪಾಂಜಲಿ ನಗರದ ಪೀಟರ್(20)ಎಂದು ಗುರುತಿಸಲಾಗಿದೆ. ಬಂಧಿತರಿಂದ 1.60ಲಕ್ಷ ರೂ.ಬೆಲೆಯ 11 ಮೊಬೈಲ್, 3 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿಯಾಗಿದ್ದ ಅರವಿಂದ್ ಅವರು ಕತ್ರಿಗುಪ್ಪೆ ಹೊರ ವರ್ತುಲ ರಸ್ತೆ ಕೆಇಬಿ ಪಾರ್ಕ್ ಬಳಿ ಕಾರು ನಿಲ್ಲಿಸಿಕೊಂಡು ಚಿಕ್ಕಮಗಳೂರಿನಿಂದ ಬರುತ್ತಿದ್ದ ಪತ್ನಿಗಾಗಿ ಕಾಯುತ್ತಿದ್ದರು. ಈ ವೇಳೆ ಬೈಕ್‌ಗಳಲ್ಲಿ ಬಂದ ಆರೋಪಿಗಳು ಕೈಯಿಂದ ಹಲ್ಲೆ ನಡೆಸಿ, ಚಾಕು ತೋರಿಸಿ 10 ಸಾವಿರ ರೂ.ಬೆಲೆಯ ಮೊಬೈಲ್ ಕಸಿದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಸಿ.ಕೆ.ಅಚ್ಚುಕಟ್ಟು ಠಾಣಾ ಪೊಲೀಸರು ಕೃತ್ಯ ನಡೆದ ಪ್ರದೇಶದಲ್ಲಿ ದೊರೆತ ಸಿಸಿಟಿವಿ ಕ್ಯಾಮರಾದಲ್ಲಿನ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳನ್ನು ಕೇವಲ 12 ಗಂಟೆಗಳೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೇಲ್ಕಂಡ ಆರೋಪಿಗಳ ಬಂಧನದಿಂದ ಸಿ.ಕೆ.ಅಚ್ಚುಕಟ್ಟು, ಬ್ಯಾಟರಾಯನಪುರ ಹಾಗೂ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ ಕಳವು ಸೇರಿ ನಾಲ್ಕು ದರೋಡೆ ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳು ರಾತ್ರಿ ವೇಳೆ ಒಂಟಿಯಾಗಿ ಸಂಚರಿಸುತ್ತಿದ್ದ ಸಾರ್ವಜನಿಕರನ್ನು ಅಡ್ಡಗಟ್ಟಿ ಬೆದರಿಕೆ ದರೋಡೆ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.







