ಗ್ರೇಡ್-ಎ, ಬಿ, ಸಿ, ಡಿ ವರ್ಗದ ಹುದ್ದೆಯ ವಯೋಮಿತಿ ಹೆಚ್ಚಳಕ್ಕೆ ನಾಡಗೌಡ ಆಗ್ರಹ
ಬೆಂಗಳೂರು, ಫೆ.12: ರಾಜ್ಯ ಸರಕಾರಿ ಗ್ರೇಡ್-ಎ, ಬಿ, ಸಿ, ಡಿ ವರ್ಗದ ಹುದ್ದೆಗಳಿಗೆ ನಿಗದಿ ಮಾಡಿರುವ ವಯೋಮಿತಿಯನ್ನು ಆಂಧ್ರಪ್ರದೇಶ ಹಾಗೂ ತೆಲಂಗಾಣ ಮಾದರಿಯಲ್ಲಿ ಹೆಚ್ಚಳ ಮಾಡಬೇಕು ಎಂದು ಜನತಾದಳ(ಯುನೈಟೆಡ್)ದ ಪಕ್ಷದ ರಾಜ್ಯಾಧ್ಯಕ್ಷ ಡಾ.ಮಲ್ಲನಗೌಡ ನಾಡಗೌಡ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾಮಾನ್ಯ ವರ್ಗದವರಿಗೆ 35, ಹಿಂದುಳಿದ ವರ್ಗಗಳಿಗೆ 38, ಪರಿಶಿಷ್ಟ ಜಾತಿ-ಪಂಗಡಗಳಿಗೆ 40 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಆದರೆ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಗರಿಷ್ಟ ವಯೋಮಿತಿಯನ್ನು ಎಲ್ಲರಿಗೂ ಅನ್ವಯಿಸುವಂತೆ 43 ರಿಂದ 44 ಕ್ಕಿಡಲಾಗಿದೆ. ಹೀಗಾಗಿ, ರಾಜ್ಯ ಸರಕಾರ ಇದೇ ಮಾದರಿಯನ್ನು ಅನುಸರಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕದಲ್ಲಿ ಎ, ಬಿ, ಸಿ, ಡಿ ವರ್ಗಗಳ ಸುಮಾರು 2.52 ಲಕ್ಷ ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿವೆ ಎಂದು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಶಾಸಕರು ಕೇಳಿದ ಪ್ರಶ್ನೆಗೆ ಸರಕಾರವೇ ಉತ್ತರಿಸಿದೆ. ಆದುದರಿಂದ ರಾಜ್ಯ ಸರಕಾರ ಗರಿಷ್ಠ ವಯೋಮಿತಿಯನ್ನು ಹೆಚ್ಚಳ ಮಾಡಿಕೊಂಡರೆ ರಾಜ್ಯಾದ್ಯಂತ ವಯೋಮಾನ ಮೀರಿದ ಏಳು ಲಕ್ಷ ಜನರಿಗೆ ನ್ಯಾಯ ಒದಗಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
2013 ಪಿ.ಸಿ.ಹೂಟಾ ಸಮಿತಿ ಶಿಫಾರಸ್ಸಿನಂತೆ ಪ್ರತಿವರ್ಷ ಜನವರಿ, ಫೆಬ್ರವರಿಯಲ್ಲಿ ಎಲ್ಲ ಶ್ರೇಣಿಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ವಾರ್ಷಿಕ ವೇಳಾಪಟ್ಟಿಯನ್ನು ಕೆಪಿಎಸ್‌ಸಿ ಜಾಲತಾಣದಲ್ಲಿ ಪ್ರಕಟಿಸಬೇಕು. 2018 ರಲ್ಲಿ ಪತ್ರಾಂಕಿತ ಹುದ್ದೆ ಸೇರಿದಂತೆ ಯಾವುದೇ ಹುದ್ದೆಗೂ ಇಲ್ಲಿಯವರೆಗೂ ನೇಮಕಾತಿ ಅಧಿಸೂಚನೆ ನೀಡಿಲ್ಲ. ಹೀಗಾಗಿ, ಕೂಡಲೇ ಅಧಿಸೂಚನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.







