ಬೆಂಗಳೂರು: ಫೆ.17 ರಂದು ಅನ್ನದಾತೋ ಸುಖಿನೋ ಭವಂತು ಕಾರ್ಯಕ್ರಮ
ಬೆಂಗಳೂರು, ಫೆ.12: ಮಂಜುನಾಥ ಟ್ರಸ್ಟ್ ವತಿಯಿಂದ ರೈತರ ಶ್ರಮ ಮತ್ತು ಆಹಾರದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಅನ್ನದಾತೋ ಸುಖಿನೋ ಭವಂತು ಎಂಬ ವಿಶೇಷ ಕಾರ್ಯಕ್ರಮವನ್ನು ಫೆ.17 ರಂದು ಮಹಾಲಕ್ಷ್ಮಿ ಪುರಂನ ಕುರುಬರಹಳ್ಳಿ ಬಸ್ ನಿಲ್ದಾಣದ ಸಮೀಪ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷ ಸಿ.ಜೆ.ಅವಿನ್ ಆರಾಧ್ಯ, ರೈತರು ಮಳೆ, ಗಾಳಿ, ಬಿಸಿಲು ಎನ್ನದೇ ಗದ್ದೆಯಲ್ಲಿ ದುಡಿಯುತ್ತಾನೆ. ಆದುದರಿಂದಾಗಿ ಆಹಾರವನ್ನು ಪೋಲು ಮಾಡುವುದನ್ನು ನಿಲ್ಲಿಸಬೇಕು. ಆಹಾರವನ್ನು ಇನ್ನಿತರರೊಡನೆ ಹಂಚಿಕೊಂಡು ತಿನ್ನಬೇಕು. ಪೋಲಾಗುವ ಆಹಾರವನ್ನು ಸಂಸ್ಕರಿಸಿ ಹಸಿವಿನಿಂದ ಬಳಲುತ್ತಿರುವವರಿಗೆ ನೀಡಬೇಕು ಸೇರಿದಂತೆ ವಿವಿಧ ವಿಷಯಗಳನ್ನಿಟ್ಟುಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪ್ರತಿದಿನ ನಾವು ಸೇವಿಸುವ ಆಹಾರವನ್ನು ಬೆಳೆಯುವುದರ ಹಿಂದೆ ರೈತರ ಅತೀವ ಶ್ರಮವಿರುತ್ತದೆ. ಒಂದೊಂದು ತುತ್ತು ಅನ್ನ ತಿನ್ನುವ ಮೊದಲು ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆಹಾರವನ್ನು ಪೋಲು ಮಾಡುವ ಮೊದಲು, ಅನ್ನವಿಲ್ಲದೆ ಹಸಿವಿನಿಂದ ಸಾಯುತ್ತಿರುವ ಸಾವಿರಾರು ಜನರನ್ನು ನೆನೆಯಬೇಕು. ಹಾಗೂ ಆಹಾರ ವ್ಯರ್ಥ ಮಾಡಿದರೆ, ನಮ್ಮ ಹಣ ವ್ಯರ್ಥ ಮಾಡಿದಂತೆ. ಹೀಗಾಗಿ, ಅನ್ನದ ಮಹತ್ವ ಎಲ್ಲರೂ ಅರಿಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಉದ್ಘಾಟಿಸಲಿದ್ದು, ಸದಾನಂದಗೌಡ, ಶಾಸಕ ಗೋಪಾಲಯ್ಯ, ಚಿತ್ರನಟ ಡಾ.ಶಿವರಾಜ್‌ಕುಮಾರ್, ವಾಗ್ಮಿ ಅಶ್ವಥ್ ರಾಮಯ್ಯ, ಮಾಜಿ ಉಪ ಮೇಯರ್ ಎಸ್.ಹರೀಶ್, ಬಿಬಿಎಂಪಿ ಆಡಳಿಯ ಪಕ್ಷದ ನಾಯಕ ಎಂ.ನಾಗರಾಜು ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.







