ಮೋಹನ್ ಭಾಗವತ್ ಹೇಳಿಕೆಗೆ ಸಂಘಪರಿವಾರದಿಂದ ಸ್ಪಷ್ಟನೆ; ಕ್ಷಮೆ ಕೇಳಲು ವಿಪಕ್ಷಗಳಿಂದ ಆಗ್ರಹ

ಹೊಸದಿಲ್ಲಿ, ಫೆ.12: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ತಮ್ಮ ಭಾಷಣದಲ್ಲಿ ಭಾರತೀಯ ಸೇನೆ ಅಥವಾ ಅದರ ಸಿದ್ಧತೆಯ ಬಗ್ಗೆ ಅಗೌರವ ಸೂಚಿಸಿಲ್ಲ ಎಂದು ಸಂಘಪರಿವಾರ ಸೋಮವಾರ ಸ್ಪಷ್ಟನೆ ನೀಡಿದೆ. ಅವರ ಹೇಳಿಕೆಯು ಸಾಮಾನ್ಯ ನಾಗರಿಕರ ಕುರಿತಾಗಿತ್ತೇ ಹೊರತು ಸೇನೆಗೆ ಸಂಬಂಧಿಸಿರಲಿಲ್ಲ ಎಂದು ಸಂಘದ ವಕ್ತಾರ ಮನ್‌ಮೋಹನ್ ವೈದ್ಯ ತಿಳಿಸಿದ್ದಾರೆ.
ದೇಶದ ಕಾನೂನು ಶಸಸ್ತ್ರ ಪಡೆಯ ರಚನೆಗೆ ಕರೆ ನೀಡಿದರೆ ಸಾಮಾನ್ಯ ನಾಗರಿಕರಿಗೆ ಸಿದ್ಧರಾಗಲು ಆರು ತಿಂಗಳು ಬೇಕು. ಆದರೆ ಸಂಘದ ಸ್ವಯಂ ಸೇವಕರು ಅದಕ್ಕಿಂತ ಕಡಿಮೆ ಅವಧಿಯಲ್ಲಿ ಸಿದ್ಧರಾಗುತ್ತಾರೆ. ಯಾಕೆಂದರೆ ಅವರು ಸೇನೆ ಮಾದರಿಯ ಶಿಸ್ತನ್ನು ಪಾಲಿಸುತ್ತಾರೆ ಎಂದು ಭಾಗವತ್ ಬಿಹಾರದ ಮೀರ್ಪುರದಲ್ಲಿ ಭಾಷಣ ಮಾಡುವ ವೇಳೆ ತಿಳಿಸಿರುವುದಾಗಿ ವೈದ್ಯ ಸ್ಪಷ್ಟನೆ ನೀಡಿದ್ದಾರೆ. ಇದರಲ್ಲಿ ಭಾರತೀಯ ಸೇನೆ ಮತ್ತು ಸಂಘದ ಸ್ವಯಂ ಸೇವಕರನ್ನು ಪರಸ್ಪರ ಹೋಲಿಕೆ ಮಾಡುವ ವಿಷಯವೇ ಇಲ್ಲ. ಅದು ಕೇವಲ ಸಾಮಾನ್ಯ ನಾಗರಿಕರು ಮತ್ತು ಸ್ವಯಂ ಸೇವಕರ ನಡುವೆ ಮಾಡಿದ ಹೋಲಿಕೆಯಾಗಿದ್ದು, ಇಬ್ಬರನ್ನೂ ಭಾರತೀಯ ಸೇನೆಯ ತರಬೇತುಗೊಳಿಸಬೇಕಿದೆ ಎಂದು ವೈದ್ಯ ತಿಳಿಸಿದ್ದಾರೆ.
ಮತ್ತೊಂದೆಡೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಭಾಗವತ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಗಾಂಧಿ, “ನಮ್ಮ ಹುತಾತ್ಮರು ಮತ್ತು ಸೇನೆಯನ್ನು ಅವಮಾನಿಸಿರುವುದಕ್ಕೆ ನಿಮಗೆ ನಾಚಿಕೆಯಾಗಬೇಕು ಭಾಗವತ್” ಎಂದು ಕಿಡಿಕಾರಿದ್ದಾರೆ. ಮೋಹನ್ ಭಾಗವತ್ ಕೂಡಲೇ ಸೇನೆಯ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯ್ ಕೂಡಾ ಭಾಗವತ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಅವರು ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ಹಂಚಿರುವ ಪಿಣರಾಯಿ, ಸಂಘ ಪರಿವಾರಕ್ಕೆ ಭಾರತೀಯ ಸಂವಿಧಾನದ ಮೇಲೆ ಗೌರವವಿಲ್ಲ ಎಂಬ ನಮ್ಮ ಆತಂಕವು ಈಗ ಸಾಬೀತಾಗಿದೆ. ಭಾಗವತ್ ಹೇಳಿಕೆ ದೇಶದ ಒಗ್ಗಟ್ಟನ್ನು ಹಾಳುಗೆಡವಿ ವಿನಾಶ ಉಂಟುಮಾಡಲು ಸಮಾನವಾದ ಸೇನೆಯನ್ನು ರಚಿಸುವ ಸಂಘಪರಿವಾರದ ಸಿದ್ದಾಂತವನ್ನು ಬಹಿರಂಗಪಡಿಸಿದೆ ಎಂದು ತಿಳಿಸಿದ್ದಾರೆ.
ಸೇನೆಯನ್ನು ಕ್ಷುಲ್ಲಕ ಎಂದು ಪರಿಗಣಿಸುವ ಭಾಗವತ್ ಹೇಳಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸರಕಾರದ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಪಿಣರಾಯಿ ಆಗ್ರಹಿಸಿದ್ದಾರೆ.







