ಪ್ರಕೃತಿ ವಿಕೋಪ ತಪ್ಪಿಸಲು ಹನುಮಾನ್ ಚಾಲೀಸಾ ಪಠಿಸಿ: ಬಿಜೆಪಿ ನಾಯಕನಿಂದ ರೈತರಿಗೆ ಪಾಠ!

ಭೋಪಾಲ್, ಫೆ.12: ಹಿಂದೂಗಳ ಪವಿತ್ರ ಶ್ಲೋಕಗಳಲ್ಲಿ ಒಂದಾಗಿರುವ ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ಪ್ರಾಕೃತಿಕ ವಿಕೋಪವನ್ನು ತಡೆಯುವಂತೆ ಮಧ್ಯಪ್ರದೇಶದ ಬಿಜೆಪಿ ನಾಯಕ ರೈತರಿಗೆ ಕರೆ ನೀಡಿದ್ದಾರೆ.
ಪ್ರತಿದಿನ ಒಂದು ಗಂಟೆಗಳ ಕಾಲ ನೀವು ಹನುಮಾನ್ ಚಾಲೀಸಾ ಪಠಿಸಿದರೆ ಪ್ರಾಕೃತಿಕ ವಿಕೋಪವನ್ನು ತಡೆಯಬಹುದು ಎಂಬುದನ್ನು ದೃಢವಾಗಿ ಹೇಳಬಲ್ಲೆ. ಹಾಗಾಗಿ ಐದು ದಿನಗಳ ಕಾಲ ಪ್ರತಿದಿನ ಒಂದು ಗಂಟೆ ಹನುಮಾನ್ ಚಾಲೀಸಾ ಪಠಿಸುವಂತೆ ನಾನು ಮತ್ತೊಮ್ಮೆ ಯುವಜನರಲ್ಲಿ ಮನವಿ ಮಾಡುತ್ತೇನೆ ಎಂದು ಬಿಜೆಪಿ ನಾಯಕ ರಮೇಶ್ ಸಕ್ಸೇನಾ ಹೇಳಿರುವುದಾಗಿ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ಮುಂದಿನ ಐದಾರು ದಿನಗಳ ಕಾಲ ತೀವ್ರ ಹವಾಮಾನ ವೈಪರಿತ್ಯಗಳು ಸಂಭವಿಸುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಸೆಹೋರ್ ಕ್ಷೇತ್ರದ ಮಾಜಿ ಶಾಸಕರಾದ ಸಕ್ಸೇನಾ ಈ ಮಾತುಗಳನ್ನಾಡಿದ್ದಾರೆ.
ಪಶ್ಚಿಮ ಬಂಗಾಳ, ಸಿಕ್ಕಿಂ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ, ಉತ್ತರ ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪೂರ್ವ ಮಧ್ಯಪ್ರದೇಶ, ವಿದರ್ಭ ಮತ್ತು ಚತ್ತೀಸ್‌ಗಡದಲ್ಲಿ ಮುಂದಿನ ಐದಾರು ದಿನಗಳ ಕಾಲ ಆಲಿಕಲ್ಲು ಮಳೆ ಸಹಿತ ತೀವ್ರ ಬಿರುಗಾಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ರವಿವಾರದಂದು ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆ ಮತ್ತು ಆಲಿಕಲ್ಲು ಮಳೆಗೆ ಓರ್ವ ರೈತ ಬಲಿಯಾಗಿದ್ದು ವ್ಯಾಪಕ ಬೆಳೆನಾಶವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.







