ಬಿಜೆಪಿಯ ಹೊಸ ನಾಟಕ 'ಸ್ಲಂ': ಸಿದ್ದರಾಮಯ್ಯ

ರಾಯಚೂರು, (ದೇವದುರ್ಗ) ಫೆ.12: ಅಧಿಕಾರದ ಅವಧಿಯಲ್ಲಿ ಬಿಜೆಪಿ ನಾಯಕರು ಕೊಳಗೇರಿ (ಸ್ಲಂ) ಪ್ರದೇಶಗಳಿಗೆ ಏನನ್ನೂ ಮಾಡಿಲ್ಲ. ಆದರೆ ಇದೀಗ ಸ್ಲಂನಲ್ಲಿ ವಾಸ್ತವ್ಯ ಹೂಡಿ ನಾಟಕವಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ರಾಯಚೂರು ದೇವದುರ್ಗ ತಾಲೂಕಿನಲ್ಲಿ ಜನಾಶೀರ್ವಾದ ಯಾತ್ರೆ ಅಂಗವಾಗಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಸ್ಲಂನವರಿಗೆ ಉಚಿತ ನೀರು ಸೌಲಭ್ಯ ಕಲ್ಪಿಸಿದ್ದು ನಮ್ಮ ಸರಕಾರ. ಆದರೆ ಇದೀಗ ಬಿ.ಎಸ್. ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಈಶ್ವರಪ್ಪ ನಾಟಕ ಆಡುತ್ತಿದ್ದಾರೆ. ಇನ್ನು ಈಶ್ವರಪ್ಪನಿಗೆ ಮೆದುಳು, ನಾಲಿಗೆಗೆ ಸಂಪರ್ಕ ಕಡಿದುಹೋಗಿದೆ. ಹಾಗಾಗಿ ಈಶ್ವರಪ್ಪ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಎಂದರು.
ದಲಿತರ ಅಭಿವೃದ್ಧಿಗೆ ಬಿಜೆಪಿಯವರು ಏನೂ ಮಾಡಿಲ್ಲ. ಚುನಾವಣೆ ವೇಳೆ ದಲಿತರ ಬಗ್ಗೆ ಸುಳ್ಳು ಪ್ರೀತಿ ತೋರಿಸುತ್ತಾರೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯವರು ಸಾಮಾಜಿಕ ನ್ಯಾಯದ ವಿರೋಧಿಗಳು. ಇಂಥವರಿಂದ ಕಾಂಗ್ರೆಸ್ ಕಲಿಯುವಂಥದ್ದು ಏನೂ ಇಲ್ಲ ಎಂದು ಟೀಕಿಸಿದರು.
ಲೋಕಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ದೇಶಕ್ಕಾಗಿ ಪ್ರಧಾನಿ ಮೋದಿ ಏನೂ ಮಾಡಿಲ್ಲ.ಆದರೂ ಬಿಜೆಪಿ ಮೋದಿಯ ಜಪ ಮಾಡುತ್ತಿದೆ. 70 ವರ್ಷದಲ್ಲಿ ಕಾಂಗ್ರೆಸ್ ಸಾಧನೆ ಇಲ್ಲ ಎನ್ನುತ್ತಾರೆ. ಆದರೆ ಆಲಮಟ್ಡಿ, ತುಂಗಭದ್ರಾ, ನಾರಾಯಣಪುರ ಜಲಾಶಯ ಕಟ್ಟಿದ್ದು ಯಾರು ಎಂದು ಪ್ರಶ್ನಿಸಿದರು.
ದೇಶಾದ್ಯಂತ ರಸ್ತೆಗಳು, ಮೊರಾರ್ಜಿ ಶಾಲೆ, ವಸತಿ ಶಾಲೆಗಳು ಸೇರಿದಂತೆ ನೂರಾರು ಯೋಜನೆಗಳನ್ನು ಕಾಂಗ್ರೆಸ್ ಜಾರಿಗೊಳಿಸಿ ಯಶಸ್ವಿಯಾಗಿದೆ. ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ ಎಂದರು.
ನಾವು ಜಾತಿ ಸಮೀಕ್ಷೆ ಮಾಡಿಸಿದ್ದು, ಶೀಘ್ರದಲ್ಲೇ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲಾಗುವುದು. ಎಸ್ಸಿ-ಎಸ್ಟಿ ಸಮುದಾಯಗಳ ಮೀಸಲಾತಿ ಶೇ.50 ದಿಂದ 70 ಗೆ ಹೆಚ್ಚಳ ಮಾಡಲಾಗುವುದು.
-ಸಿದ್ದರಾಮಯ್ಯ, ಮುಖ್ಯಮಂತ್ರಿ







