ಅಲ್ಪಸಂಖ್ಯಾತರ ಶಾಲೆಗಳಿಗೆ ವಿನಾಯಿತಿ ನೀಡಲು ನಿರಾಕರಿಸಿದ ಹೈಕೋರ್ಟ್
ಆರ್‌ಟಿಇ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ವಿಚಾರ

ಬೆಂಗಳೂರು, ಫೆ.12: ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಅಡಿಯಲ್ಲಿ ಬರುವ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವುದರಿಂದ ದಿ ಫೌಂಡೇಶನ್ ಎಜುಕೇಷನ್ ಟ್ರಸ್ಟ್ ಅಧೀನದ ಕ್ರಿಶ್ಚಿಯನ್ ಶಾಲೆಗಳಿಗೆ ವಿನಾಯಿತಿ ನೀಡಲು ಹೈಕೋರ್ಟ್ ನಿರಾಕರಿಸಿದೆ.
ದಿ ಫೌಂಡೇಶನ್ ಎಜುಕೇಷನ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಆರ್‌ಟಿಇ ಅಡಿಯಲ್ಲಿ ಬರುವ ವಿದ್ಯಾರ್ಥಿಗಳನ್ನು ದಿ ಫೌಂಡೇಶನ್ ಎಜುಕೇಷನ್ ಟ್ರಸ್ಟ್ ಅಧೀನದ ಕ್ರಿಶ್ಚಿಯನ್ ಶಾಲೆಗಳಿಗೆ ದಾಖಲಿಸಿಕೊಳ್ಳುವುದರಿಂದ ವಿನಾಯಿತಿ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ಆರ್‌ಟಿಇ ಕಾಯ್ದೆ ಅನ್ವಯ ಅಲ್ಪಸಂಖ್ಯಾತರ ಶಾಲೆಗಳು ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ವಿಭಾಗೀಯ ನ್ಯಾಯಪೀಠವು ಆರ್‌ಟಿಇ ಕಾಯ್ದೆ ಅನ್ವಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕೆಂದು ಅಲ್ಪಸಂಖ್ಯಾತರ ಶಾಲೆಗಳಿಗೆ ಈ ಮೊದಲು ಹೈಕೋರ್ಟ್ ನಿರ್ದೇಶನ ನೀಡಿತ್ತು. ಈ ನಿರ್ದೇಶನವನ್ನು ಪ್ರಶ್ನಿಸಿ ದಿ ಫೌಂಡೇಶನ್ ಎಜುಕೇಷನ್ ಟ್ರಸ್ಟ್‌ನವರು ಪುನಹ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೋಮವಾರ ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯ ನ್ಯಾಯಪೀಠವು ಆರ್‌ಟಿಇ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತರ ಶಾಲೆಗಳು ಶೇ.25ರಷ್ಟು ಪ್ರವೇಶ ನೀಡಬೇಕೆಂದು ಮಧ್ಯಂತರ ನಿರ್ದೇಶನ ನೀಡಿತು.







