ಹಕ್ಕು ಪತ್ರ ವಿತರಣೆಯಲ್ಲಿ ಕಳಪೆ ಸಾಧನೆ ಬಗ್ಗೆ ಶಾಸಕ ಅಭಯಚಂದ್ರ ಅಸಮಾಧಾನ
ಮಂಗಳೂರು ತಾಲೂಕು ಪಂಚಾಯತ್ ಸಭೆ
ಮಂಗಳೂರು, ಫೆ.12: ಮಂಗಳೂರು ತಾಲೂಕಿನಲ್ಲಿ 94 ಸಿ ಹಕ್ಕುಪತ್ರ ವಿತರಣೆಯಲ್ಲಿ ಹೆಚ್ಚಿನ ಸಾಧನೆಯಾಗಿಲ್ಲದ ಬಗ್ಗೆ ಮಂಗಳೂರು ತಾಲೂಕು ಪಂಚಾಯತ್ ತ್ರೈಮಾಸಿಕ ಸಭೆಯಲ್ಲಿಂದು ಶಾಸಕ ಅಭಯಚಂದ್ರ ಜೆನ್ ಅಸಮಾಧಾನ ವ್ಯಕ್ತಪಡಿಸಿದರು.
ತಾ.ಪಂ. ಸಾಮರ್ಥ್ಯ ಸೌಧದವಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಭಯಚಂದ್ರ ಜೈನ್, ಇತರ ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಮುಂದಿನ 10 ದಿನಗಳಲ್ಲಿ ಹಕ್ಕುಪತ್ರ ವಿತರಣೆ ಕಾರ್ಯವನ್ನು ತ್ವರಿತಗತಿಯಲ್ಲಿ ನೆರವೇರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೂಡುಬಿದಿರೆ ತಹಶೀಲ್ದಾರ್ ಮಾಹಿತಿ ನೀಡುತ್ತಾ, 94ಸಿ ಹಕ್ಕು ಪತ್ರ ವಿತರಣೆಗೆ ಸಂಬಂಧಿಸಿದಂತೆ ಮೂಡಬಿದಿರೆ ವ್ಯಾಪ್ತಿಯಲ್ಲಿ 2690 ಅರ್ಜಿಗಳು ಬಂದಿದ್ದು, 916 ಅರ್ಹ ಪತ್ರಗಳು ಮಂಜೂರಾಗಿವೆ. 1024 ಅರ್ಜಿಗಳು ಪುನರಾವರ್ತನೆಯಾಗಿರುವುದರಿಂದ ಆ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದರು.
ಸಭೆಯಲ್ಲಿ ಮಂಗಳೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಮತ್ತು ದಕ್ಷಿಣ ವಲಯದ ಪತ್ರಾಂಕಿತ ವ್ಯವಸ್ಥಾಪಕಿ ಪೂರ್ಣಿಮಾ ಶೆಟ್ಟಿ, ಶಿಕ್ಷಕರಿಗೆ ಸೆಪ್ಟಂಬರ್ ಬಳಿಕ ನಾಲ್ಕು ತಿಂಗಳ ಸಂಬಳವೂ ಕೈ ಸೇರದಿರುವ ಬಗ್ಗೆ ಪ್ರಸ್ತಾಪಿಸಿದರು. ಬಿಇಒ ಮಂಜುಳಾ ಮಾತನಾಡಿ, ಮುಲ್ಕಿ ಸದಾಶಿವನಗರ ಮತ್ತು ಮುಲ್ಲಕಾಡಿನಲ್ಲಿರುವ ರಾಷ್ಟ್ರೀಯ ಮಾಧ್ಯಮಿಕ ಶಾಲೆಯಲ್ಲಿ 14 ಮಂದಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಕರಿಗೆ ಸೆಪ್ಟಂಬರ್‌ವರೆಗಿನ ಸಂಬಳ ನೀಡಲಾಗಿದ್ದು, ಉಳಿದ ನಾಲ್ಕು ತಿಂಗಳ ಸಂಬಳ ಇನ್ನೂ ಕೈ ಸೇರಿಲ್ಲ. ಅಲ್ಲದೆ 14 ಮಂದಿ ಪರಿವೀಕ್ಷಣಾ ಸಿಬಂದಿಗೂ ಕಳೆದ ಸುಮಾರು ಎರಡು ತಿಂಳಿನಿಂದ ಸಂಬಳ ದೊರಕಿಲ್ಲ ಎಂದರು.
ಮಂಗಳೂರು ದಕ್ಷಿಣ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಅಂಬ್ಲಮೊಗರು ಮತ್ತು ಕುಂಪಲ ರಾಷ್ಟ್ರೀಯ ಮಾಧ್ಯಮಿಕ ಶಾಲೆಯಲ್ಲಿ 12 ಮಂದಿ ಶಿಕ್ಷಕರಿದ್ದು, ನಾಲ್ಕು ತಿಂಗಳಿನಿಂದ ಸಂಬಳ ನೀಡಲಾಗಿಲ್ಲ. ದಕ್ಷಿಣ ವಲಯ ವ್ಯಾಪ್ತಿಯ 16ಕ್ಕೂ ಹೆಚ್ಚು ಪರಿವೀಕ್ಷಣ ಸಿಬಂದಿಗೆ ಒಂದು ತಿಂಗಳ ಸಂಬಳ ಬಾಕಿ ಇರುವುದಾಗಿ ಪೂರ್ಣಿಮಾ ಶೆಟ್ಟಿ ತಿಳಿಸಿದರು.
ಶಾಸಕ ಅಭಯಚಂದ್ರ ಜೈನ್ ಪ್ರತಿಕ್ರಿಯಿಸಿ, ಈ ಬಗ್ಗೆ ಸಂಬಂಧಪಟ್ಟವರು ಕ್ರಮ ವಹಿಸುವಂತೆ ಸೂಚಿಸಿದರು. ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಇರುವ ಕ್ರಮಗಳು ಮತ್ತು ಗೊಂದಲಗಳ ನಿವಾರಿಸುವ ಸಂಬಂಧ ಮಾಹಿತಿ ನೀಡಲು ಈಗಾಗಲೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಯೋಜನೆಯ ನಿರ್ವಾಹಕರಿಗೆ ಈಗಾಗಲೇ ಪೂರಕ ಸ್ಯಾಟಲೈಟ್ ತರಬೇತಿಗಳನ್ನು ನೀಡಲಾಗಿದೆ. ಯೋಜನೆಯ ಆದೇಶ ಪ್ರತಿಗಳನ್ನು ಶಾಸಕರುಗಳ ಮುಖಾಂತರವೇ ನೀಡಬೇಕು ಎಂಬುದಾಗಿ ಪಂಚಾಯತ್‌ಗಳಿಗೆ ತಿಳಿಸಲಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ವಿವರಿಸಿದರು.
ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಉಪಾಧ್ಯಕ್ಷೆ ಪೂರ್ಣಿಮಾ, ಸ್ಥಾಯಿ ಸಮಿತಿ ಅಧ್ಯಕ್ಷೆ ರೀಟಾ ನೊರೋನ್ಹಾ, ಕಾರ್ಯನಿರ್ವಾಹಕ ಅಧಿಾರಿ ಜಿ. ಸದಾನಂದ ಉಪಸ್ಥಿತರಿದ್ದರು.







