ಅಂತಾರಾಷ್ಟ್ರೀಯ ಗುಣಮಟ್ಟದ ವ್ಯಾಯಾಮದ ಉಪಕರಣಗಳ ಅಳವಡಿಕೆ: ಸಚಿವ ಕೆ.ಜೆ.ಜಾರ್ಜ್
ಜಗಜೀವನ್ ರಾಮ್‌ನಗರ ಉದ್ಯಾನವನದಲ್ಲಿನ ಜಿಮ್ ಉದ್ಘಾಟನೆ
.jpg)
ಬೆಂಗಳೂರು, ಫೆ. 12: ಸಾರ್ವಜನಿಕರ ಅನುಕೂಲಕ್ಕಾಗಿ ಇಲ್ಲಿನ ಜಗಜೀವನ್ ರಾಮ್ ನಗರ ಉದ್ಯಾನವನದಲ್ಲಿ 52ಲಕ್ಷ ರೂ.ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ವ್ಯಾಯಾಮ ಉಪಕರಣಗಳನ್ನು ಅಳವಡಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಸೋಮವಾರ ಜಗಜೀವನ್ ರಾಮ್‌ನಗರ ವಾರ್ಡ್-136ರಲ್ಲಿನ ಉದ್ಯಾನವನದಲ್ಲಿ ಅಳವಡಿಸಿರುವ ತೆರೆದ ವ್ಯಾಯಾಮ ಶಾಲೆ ಉದ್ಘಾಟಿಸಿದ ಅವರು, ಅಲ್ಲಿ ಅಳವಡಿಸಿರುವ ಉಪಕರಣಗಳನ್ನು ಪರಿಶೀಲಿಸಿದರು. ಈ ಸೌಲಭ್ಯವನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕೆಂದು ಸೂಚಿಸಿದರು.
ಉದ್ಯಾನವನದಲ್ಲಿ ಮಹಿಳೆಯರು, ಪುರಷರು, ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆಗೊಳಿಸಿರುವುದು ವಿಶೇಷವಾಗಿದೆ ಎಂದ ಅವರು, ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ಇಂತಹ ಅಭಿವೃದ್ಧಿ ಕಾರ್ಯಗಳು ನಗರದ ಎಲ್ಲ ಭಾಗಗಳಲ್ಲಿ ಕಾಣಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಬಿಎಂಪಿ ಮೇಯರ್ ಸಂಪತ್‌ರಾಜ್ ಮಾತನಾಡಿ, ಸ್ಥಳೀಯ ನಗರ ಪಾಲಿಕೆ ಸದಸ್ಯೆ ಸೀಮಾ ಅಲ್ತಾಫ್ ಖಾನ್ ತಮ್ಮ ವಾರ್ಡ್‌ನಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಿದ್ದು, ಅದರ ಸಲುವಾಗಿ ಅಂತಾರಾಷ್ಟ್ರೀಯ ಮಟ್ಟದ ವ್ಯಾಯಾಮ ಉಪಕರಣ ಅಳವಡಿಸಿರುವುದು ಸಾಕ್ಷಿಯಾಗಿದೆ. ಅಲ್ಲದೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕ ಎಮ್.ಶಿವರಾಜು, ಸ್ಥಳೀಯ ಪಾಲಿಕೆ ಸದಸ್ಯೆ ಸೀಮಾ ಅಲ್ತಾಫ್ ಖಾನ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.







