ಪಾಕಿಸ್ತಾನ ಜೊತೆ ಮಾತುಕತೆ ಅನಿವಾರ್ಯ: ಮೆಹಬೂಬ ಮುಫ್ತಿ

ಹೊಸದಿಲ್ಲಿ, ಫೆ.12: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸೋಮವಾರದಂದು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಮಾತುಕತೆಗೆ ಕರೆ ನೀಡಿದರು. ನಿಯಂತ್ರಣ ರೇಖೆಯ ಬಳಿ ಉಭಯ ದೇಶಗಳ ಸೇನೆಯ ಮಧ್ಯೆ ಹೆಚ್ಚುತ್ತಿರುವ ಸಂಘರ್ಷ ಮತ್ತು ಶನಿವಾರಂದು ಐದು ಸೈನಿಕರು ಮತ್ತು ಓರ್ವ ನಾಗರಿಕನನ್ನು ಬಲಿ ಪಡೆದುಕೊಂಡ ಸುಂಜ್ವಾನ್ ಸೇನಾ ನೆಲೆಯ ಮೇಲೆ ಉಗ್ರರು ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ಮುಫ್ತಿ ಈ ಕರೆಯನ್ನು ನೀಡಿದ್ದಾರೆ. ಇದೇ ವೇಳೆ ಸೋಮವಾರ ಬೆಳಿಗ್ಗೆ ಶ್ರೀನಗರದ ಕರನ್‌ನಗರದಲ್ಲಿ ಉಗ್ರರ ದಾಳಿ ಸಂಚನ್ನು ಸೇನೆ ವಿಫಲಗೊಳಿಸಿದೆ.
ಎರಡೂ ದೇಶಗಳಿಗೆ ಯುದ್ಧವು ಒಂದು ಆಯ್ಕೆಯಲ್ಲ. ಆದರೆ ಉಭಯ ದೇಶಗಳು ರಕ್ತಪಾತವನ್ನು ನಿಲ್ಲಿಸಲು ಮಾತುಕತೆಯಲ್ಲಿ ತೊಡಗುವುದು ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ನನ್ನ ಈ ಹೇಳಿಕೆಗೆ ಸುದ್ದಿ ವಾಹಿನಿಗಳು ನನ್ನನ್ನು ದೇಶದ್ರೋಹಿ ಎಂದು ಕರೆಯಲಿವೆ ಎಂಬುದು ನನಗೆ ತಿಳಿದಿದೆ. ಆದರೆ ಜಮ್ಮು ಮತ್ತು ಕಾಶ್ಮೀರದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ಎರಡೂ ದೇಶಗಳು ಮಾತುಕತೆ ನಡೆಸಲೇ ಬೇಕಿದೆ ಎಂದು ಮೆಹಬೂಬ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ನಾವು ಪಾಕಿಸ್ತಾನದ ವಿರುದ್ಧ ನಡೆಸಿರುವ ಎಲ್ಲಾ ಯುದ್ಧಗಳನ್ನು ಜಯಿಸಿದ್ದೇವೆ. ಆದರೆ ಈಗಲೂ ಮಾತುಕತೆಯ ಹೊರತಾಗಿ ಬೇರೆ ಯಾವುದೇ ಪರಿಹಾರವಿಲ್ಲ. ಎಷ್ಟು ಸಮಯ ನಮ್ಮ ಸೈನಿಕರು ಮತ್ತು ನಾಗರಿಕರು ಸಾಯುತ್ತಿರಬೇಕು ಎಂದು ಪ್ರಶ್ನಿಸಿರುವ ಮೆಹಬೂಬ, ಈಗಿನ ಸಮಯದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಲಾಹೋರ್‌ಗೆ ಬಸ್ ಸೇವೆ ಆರಂಭಿಸುವ ಮೂಲಕ ಮಾತುಕತೆಯ ಬಗ್ಗೆ ಮಾತನಾಡಿದ್ದರೆ ಈ ಮಾಧ್ಯಮಗಳು ಅವರನ್ನು ಏನೆಂದು ಕರೆಯುತ್ತಿದ್ದವೋ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕದನ ವಿರಾಮ ಉಲ್ಲಂಘನೆಯ ಬಗ್ಗೆ ಮಾತನಾಡಿದ ಮೆಹಬೂಬ, ಕಳೆದ ಮೂರು ವರ್ಷಗಳಲ್ಲಿ ಗಡಿಯಲ್ಲಿ 834 ಬಾರಿ ಕದನ ವಿರಾಮವನ್ನು ಉಲ್ಲಂಘಿಸಲಾಗಿದೆ. ಈ ವೇಳೆ 97 ಮಂದಿ ಹತರಾಗಿದ್ದು 383 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.







