‘ದಾರಿ ತಪ್ಪಿಸು ದೇವರೇ!’ ಕೃತಿ ಕುವೈಟಿನಲ್ಲಿ ಬಿಡುಗಡೆ

ಉಡುಪಿ, ಫೆ.12: ಉಡುಪಿಯ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ್ ಕಾಮತ್ ಅವರ ‘ದಾರಿ ತಪ್ಪಿಸು ದೇವರೇ!’ ಪ್ರವಾಸ ಕಥನ ಕೃತಿ ಶನಿವಾರ ಕುವೈಟ್‌ನಲ್ಲಿ ಬಿಡುಗಡೆಗೊಂಡಿತು.
ಕುವೈಟ್ ಕನ್ನಡ ಕೂಟ, ಸಾಹಿತ್ಯ ಸಂಪದ ಕುವೈತ್, ಭಾರತೀಯ ಪ್ರವಾಸೀ ಪರಿಷತ್, ಜಿಎಸ್‌ಬಿ ಸಭಾ ಕುವೈಟ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ವಿಖ್ಯಾತ ಕುವೈಟ್ ಟವರಿನ ಬಳಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದ ಸಾಹಿತ್ಯ ಸಂಪದದ ಆಝಾದ್ ಐ.ಎಸ್, ಕರಾವಳಿಯಾದ್ಯಂತ ಸುತ್ತಾಡಿದ ಅನುಭವ ಕಥೆಯುಳ್ಳ ಈ ಕೃತಿಯು ತಾಯ್ನಾಡಿನಿಂದ ದೂರ ಇರುವ ನಮ್ಮನ್ನೆಲ್ಲ ಕನ್ನಡ ನಾಡಿಗೆ ಕರೆದೊಯ್ಯುತ್ತದೆ. ಕನ್ನಡ ನೆಲದಲ್ಲಿ ನಾವೂ ಲೇಖಕರ ಜೊತೆ ಸುತ್ತಾಡಿದ ಅನುಭವವಾಗುತ್ತದೆ. ಕನ್ನಡ ಲೋಕದ ಪ್ರವಾಸೀ ಸಾಹಿತ್ಯ ಮತ್ತಷ್ಟು ಬೆಳಗಲಿ ಎಂದು ಶುಭ ಹಾರೈಸಿದರು.
ಜಿಎಸ್‌ಬಿ ಸಭಾದ ಮಂಜೇಶ್ವರ ಮೋಹನದಾಸ ಕಾಮತ್ ಮಾತನಾಡಿ, ಅರಬ್ ರಾಷ್ಟ್ರದಲ್ಲಿ ಕನ್ನಡ ಪುಸ್ತಕವೊಂದು ಬಿಡುಗಡೆಯಾಗುತ್ತಿರುವುದು ಅತ್ಯಂತ ಸಂತೋಷ ಉಂಟುಮಾಡುತ್ತಿದೆ. ಕನ್ನಡ ಸಾಹಿತ್ಯ ಜಗತ್ತಿನಾ್ಯಂತ ಪಸರಿಸಲಿ ಎಂದು ಹೇಳಿದರು.
ಭಾರತೀಯ ಪ್ರವಾಸೀ ಪರಿಷತ್ತಿನ ರಾಜ್ ಭಂಡಾರಿ ಮಾತನಾಡಿ ಪ್ರವಾಸವೆಂದರೆ ಕೇವಲ ಪೋಲಿ ಅಲೆತವಲ್ಲ. ಅಲ್ಲೂ ಬೆರಗು ಹುಟ್ಟಿಸುವ ಕಥೆಗಳಿರುತ್ತವೆ. ಮಾನವೀಯ ಮುಖಗಳಿರುತ್ತವೆ. ಅವು ಈ ಕೃತಿಯಲ್ಲಿ ಅಮೋಘವಾಗಿ ದಾಖಲಾಗಿವೆ. ಕುವೈಟ್ ಮಾತ್ರವಲ್ಲದೆ ದುಬೈ ಹಾಗೂ ಒಮಾನ್ ದೇಶಗಳಲ್ಲೂ ಈ ಕೃತಿಯು ಬಿಡುಗಡೆಗೊಳ್ಳಲಿದೆ ಎಂದರು.
ಸಂತೋಷ್ ಶೆಟ್ಟಿ, ಅಮೃತ್ ರಾಜ್, ಶ್ರೀನಿವಾಸ ಪ್ರಭು ಮುಂತಾದವರು ಉಪಸ್ಥಿತರಿದ್ದರು.







