ಬದಲಾವಣೆ ಪ್ರಕೃತಿ ಧರ್ಮ: ಡಾ.ಪಾದೆಕಲ್ಲು ವಿಷ್ಣು ಭಟ್

ಉಡುಪಿ, ಫೆ.12: ಯಾವುದೂ ಇದ್ದಂತೆ ಇರಲು ಸಾಧ್ಯವಿಲ್ಲ. ಯಕ್ಷಗಾನ ಕಲೆಯೂ ಇದಕ್ಕೆ ಹೊರತಾಗಿಲ್ಲ. ಬದಲಾವಣೆ ನಿರಂತರ ಪ್ರಕ್ರಿಯೆ. ಯಾವುದು ಗಟ್ಟಿಯಾದುದೋ ಅದು ಉಳಿದುಕೊಳ್ಳುತ್ತದೆ ಎಂದು ಲೇಖಕ, ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣು ಭಟ್ ಹೇಳಿದ್ದಾರೆ.
ಅಂಬಲಪಾಡಿ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯ 60ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕಲಾಮಂಡಳಿ ಉಳಿದ ಹವ್ಯಾಸಿ ಯಕ್ಷಗಾನ ಕಲಾಮಂಡಳಿಗೆ ಮಾದರಿಯಾಗಿದೆ ಎಂದರು.
ಮಂಡಳಿಯ ಆಶ್ರಯದಾತ ಧರ್ಮದರ್ಶಿ ಡಾ. ನಿ.ಬೀ ವಿಜಯ ಬಲ್ಲಾಳರು ಮಂಡಳಿಯ ಸ್ಥಾಪಕ ಸದಸ್ಯರ ನೆನಪಿನಲ್ಲಿ ನೀಡುವ ಮೂರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿ, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿ ಹಾಗೂ ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಗಳನ್ನು ಅನುಕ್ರಮವಾಗಿ ಪ್ರಭಾಕರ ಆಚಾರ್ಯ ಹೆಮ್ಮಾಡಿ, ಸುಂದರ ಶೆಟ್ಟಿಗಾರ್ ಮಾರ್ಪಳ್ಳಿ ಹಾಗೂ ಮ.ನಾ ಹೆಬ್ಬಾರ್ ಕಬ್ಬಿನಾಲೆ ಸ್ವೀಕರಿಸಿದರು.
ವಿದ್ಯಾಪ್ರಸಾದ್, ಡಾ.ಶೈಲಜಾಭಟ್ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ನಾರಾಯಣ ಎಂ. ಹೆಗಡೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಮಂಡಳಿ ಅಧ್ಯಕ್ಷ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಜೆ ಕೃಷ್ಣ ವರದಿ ವಾಚಿಸಿದರು. ಉಪಾಧ್ಯಕ್ಷ ಅಜಿತ್ ಕುಮಾರ್ ವಂದಿಸಿದರು. ಕೋಶಾಧಿಕಾರಿ ನಟರಾಜ ಉಪಾಧ್ಯ ಕಾರ್ಯಕ್ರಮ ನಿರ್ವಹಿಸಿದರು.
ಸಮಾರಂಭದ ಪೂರ್ವದಲ್ಲಿ ಮಂಡಳಿಯ ಬಾಲಕಲಾವಿದರಿಂದ ಯಕ್ಷಗಾನ ಪೂರ್ವರಂಗ ಪ್ರದರ್ಶನಗೊಂಡಿತು. ಕೊನೆಯಲ್ಲಿ ಮಂಡಳಿಯ ಬಾಲಕಲಾವಿದ ರಿಂದ ಯಕ್ಷಗಾನ ‘ಸುದರ್ಶನ ವಿಜಯ’ ಪ್ರದರ್ಶನಗೊಂಡಿತು.







