ದಲಿತರ ಮೇಲೆ ನಿರಂತರ ದೌರ್ಜನ್ಯ: ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಖಂಡನೆ
ಮೈಸೂರು,ಫೆ.12: ರಾಜ್ಯದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ವಿಫಲವಾದರೆ ರಾಜ್ಯಾದ್ಯಂತ ಎಸ್.ಡಿ.ಪಿ.ಐ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿದಿನ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ಹತ್ಯೆಗಳು ನಡೆಯುತ್ತಿದ್ದರೂ ಯಾವುದೇ ರಾಜಕೀಯ ಪಕ್ಷಗಳು ಖಂಡನೆ ವ್ಯಕ್ತಪಡಿಸದೆ, ಚುನಾವಣಾ ಸಂದರ್ಭದಲ್ಲಿ ದಲಿತರ ಮನೆಗಳಿಗೆ ಭೇಟಿ ಕೊಡುವುದು, ವಾಸ್ತವ್ಯ ಹೂಡುವುದರ ಮೂಲಕ ನಾಟಕವಾಡುತ್ತಿದೆ. ಇಂತಹ ನಾಯಕರನ್ನು ದಲಿತರು ಮನೆಗೆ ಸೇರಿಸಬಾರದು ಎಂದು ಸ್ವಾಭಿಮಾನಿ ದಲಿತರಿಗೆ ಅಬ್ದುಲ್ ಮಜೀದ್ ಕರೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ದಲಿತರ ಮೇಲೆ ಹತ್ಯೆ, ದಾನಮ್ಮಳನ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ, ಕಲಬುರುಗಿಯಲ್ಲಿ ದಲಿತರ ಮೇಲೆ ದೌರ್ಜನ್ಯ ಮೂಡಿಗೆರೆಯ ಧನ್ಯಶ್ರೀ ಆತ್ಮಹತ್ಯೆ,ಗೆ ಕಾರಣರಾದ ಸಂಘಪರಿವಾರದವರು ಎಂಬ ಸಂಶಯ ಇದ್ದರೂ ಬಿಜೆಪಿ ನಾಯಕರು ಮಾತನಾಡದಿರುವುದು ನಾಚಿಕೆಗೇಡು ಎಂದು ಹೇಳಿದರು.
ಸಂಸದೆ ಶೋಭಾ ಕರಂದ್ಲಾಜೆಯವರ ಸ್ವಂತ ಕ್ಷೇತ್ರವಾದ ಕೊಪ್ಪದಲ್ಲಿ ಭಜರಂಗದಳದ ಕಾರ್ಯಕರ್ತರು ಗೋಮಾಂಸವಿದೆ ಎಂದು ದಲಿತ ಕುಟುಂಬದ ಮೇಲೆ ದಾಳಿ ನಡೆಸಿ ಮನೆಯೊಳಗೆ ನುಗ್ಗಿ ದಾಂಧಲೆ ನಡೆಸಿದರೂ ಅವರು ಮಾತನಾಡುವುದಿಲ್ಲ. ಆದರೆ ಮೈಸೂರಿನ ಕ್ಯಾತಮಾರನಹಳ್ಳಿಯ ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿರುವುದು ಇವರ ನಾಟಕೀಯ ಸ್ಥಿತಿಯನ್ನು ತೋರುತ್ತದೆ. ಚುನಾವಣೆ ಬಂದಾಗ ದಲಿತರ ಸ್ಥಿತಿಗತಿಯ ಮೇಲೆ ಮೊಸಳೆ ಕಣ್ಣೀರು ಸುರಿಸುತ್ತಾ ಅನುಕಂಪ ಗಿಟ್ಟಿಸುವುದು ರಾಜಕೀಯ ಪ್ರೇರಿತ ಎಂದು ಅಬ್ದುಲ್ ಮಜೀದ್ ಕಿಡಿಕಾರಿದರು.
ದಲಿತರು ಈ ಸಂದರ್ಭದಲ್ಲಿ ಮೊಸಳೆ ಕಣ್ಣೀರು ಸುರಿಸುವ ರಾಜಕಾರಣಿಗಳ ಕುತಂತ್ರಕ್ಕೆ ಬಲಿಯಾಗದೆ ಎಚ್ಚರದಿಂದ ಇರಬೇಕು. ದಲಿತ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಅಬ್ದುಲ್ ಮಜೀದ್ ಕರೆ ನೀಡಿದ್ದಾರೆ.







