ಫೆ. 14: ಸುರತ್ಕಲ್-ಗುರುಪುರ ಹೋಬಳಿ ಮಟ್ಟದ ಹಕ್ಕುಪತ್ರ ವಿತರಣೆ
ಮಂಗಳೂರು, ಫೆ.12: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 94ಸಿ ಹಾಗೂ 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ನಿವಾಸಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಫೆ.14ರಂದು ಸಂಜೆ ಸುರತ್ಕಲ್ ಸಮೀಪದ ಕರ್ನಾಟಕ ಸೇವಾ ವೃತ್ತದ ಬಳಿಯ ಬಯಲು ರಂಗಮಂದಿರ ಮತ್ತು ಗುರುಪುರ ಕೈಕಂಬದಲ್ಲಿ ನಡೆಯಲಿದೆ ಎಂದು ಶಾಸಕ ಮೊಯ್ದಿನ್ ಬಾವಾ ಹೇಳಿದರು.
ಸೋಮವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸುರತ್ಕಲ್‌ನಲ್ಲಿ ಸಂಜೆ 4 ಗಂಟೆಗೆ ಹಾಗೂ ಗುರುಪುರದಲ್ಲಿ ಸಂಜೆ 5:30ಕ್ಕೆ ಹಕ್ಕುಪತ್ರ ವಿತರಿಸಲಿದ್ದಾರೆ.
ಸುರತ್ಕಲ್ ಹೋಬಳಿಯಲ್ಲಿ 94ಸಿಸಿ ಅಡಿ 3,784 ಅರ್ಜಿಗಳು ಸ್ವೀಕೃತಗೊಂಡಿದ್ದು, ಆ ಪೈಕಿ 1,820 ಹಕ್ಕುಪತ್ರಗಳು ವಿತರಣೆಗೆ ಸಿದ್ಧವಾಗಿದೆ. ಉಳಿದ ಅರ್ಜಿಗಳು ಪರಿಶೀಲನೆಯಲ್ಲಿವೆ. ಗುರುಪುರ ಹೋಬಳಿಯಲ್ಲಿ 94ಸಿಸಿ ಅಡಿ ಸ್ವೀಕೃತವಾದ 3,396 ಅರ್ಜಿಗಳೂ ಪುರಸ್ಕೃತಗೊಂಡಿವೆ. ಆ ಪೈಕಿ 1,496 ಹಕ್ಕುಪತ್ರಗಳು ವಿತರಣೆಗೆ ಸಿದ್ಧಗೊಂಡಿವೆ. ಅಲ್ಲದೆ 94ಸಿ ಅಡಿ 224 ಅರ್ಜಿಗಳು ಸ್ವೀಕೃತಗೊಂಡಿದ್ದು, 47 ಹಕ್ಕುಪತ್ರಗಳನ್ನು ಈಗಾಗಲೇ ವಿತರಿಸಲಾಗಿದೆ. 86 ಹಕ್ಕುಪತ್ರಗಳು ವಿತರಣೆಗೆ ಸಿದ್ಧಗೊಂಡಿವೆ. ಅಕ್ರಮ ಸಕ್ರಮದಡಿ 83 ಹಕ್ಕುಪತ್ರಗಳನ್ನು ಕೂಡ ಈ ಸಂದರ್ಭ ವಿತರಿಸಲಾಗುವುದು ಎಂದರು.







