ಮಹಿಳೆ ಮತ್ತು ಮಕ್ಕಳು ನಿರಂತರ ಬಲಿಪಶುಗಳು: ಎಂ.ಬಸವಯ್ಯ
.jpg)
ತುಮಕೂರು,ಫೆ.12: ಸಮಾಜದಲ್ಲಿ ಮಹಿಳೆ ಮತ್ತು ಮಕ್ಕಳು ನಿರಂತರವಾಗಿ ಬಲಿಪಶುಗಳಾಗುತ್ತಿದ್ದಾರೆ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ಗಾಂಧಿವಾದಿ ಬಸವಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಎಂ.ಜಿ.ರಸ್ತೆ ಬಾಲಭವನದಲ್ಲಿ ಬೆಂಗಳೂರಿನ ದೃಶ್ಯ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಾಲಭವನ ವತಿಯಿಂದ ನಡೆದ `ವಿನಾಶಕಾಲೆ' ನಾಟಕಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡುತಿದ್ದ ಅವರು, ಒಂದು ಮನೆಯಲ್ಲಿ ಗಂಡಸು ಮದ್ಯಪಾನ ಮಾಡಿದರೆ ಅದರ ಸಂಕಷ್ಟ ಎದುರಿಸುವುದು ಮಹಿಳೆ ಮತ್ತು ಮಕ್ಕಳು. ಇಂತಹ ಸಂದರ್ಭದಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಜಾಗೃತಿ ಮೂಡಿಸುವ ನಾಟಕಗಳು ಹೆಚ್ಚೆಚ್ಚು ಪ್ರದರ್ಶನವಾಗಬೇಕು ಎಂದರು.
ಬೆಂಗಳೂರಿನ ದೃಶ್ಯ ಕಲಾ ಸಂಘ ಹಲವಾರು ರಚನಾತ್ಮಕ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ. ಪ್ರಸ್ತುತ ವಿನಾಶಕಾಲೆ ನಾಟಕದ ಮೂಲಕ ಮಹಿಳೆಯರು ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ಸ್ತ್ರೀ ಸಮಾನತೆ ಬರೀ ಮಾತಿನಲ್ಲಿ ಹೇಳಿದರೆ ಸಾಲದೆ, ಅದನ್ನು ಅನುಷ್ಠಾನಕ್ಕೆ ತರಲು ಪ್ರತಿಯೊಬ್ಬರು ಕೈ ಜೋಡಿಸುವಂತಾಗಬೇಕು ಎಂದು ಎಂ.ಬಸವಯ್ಯ ನುಡಿದರು.
ಸಾಂತ್ವನ ಕೇಂದ್ರದ ಸಾ.ಚಿ.ರಾಜಕುಮಾರ್ ಮಾತನಾಡಿ, ಭ್ರೂಣಹತ್ಯೆ ಸಮಾಜದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಯಾವ ರೂಪದಲ್ಲಿ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕಳೆದ 10 ವರ್ಷಗಳ ಹಿಂದೆ ಇದ್ದ ಭ್ರೂಣ ಹತ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ ಸಂಪೂರ್ಣವಾಗಿ ನಿಂತಿಲ್ಲ ಎನ್ನುವುದು ಕಟು ಸತ್ಯ. 10 ವರ್ಷಗಳ ಹಿಂದೆ ಗಂಡು ಮಗು ಬೇಕು ಎನ್ನುವ ಮನಸ್ಥಿತಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಅದೂ ಶೇ.40 ರಷ್ಟು ಮಾತ್ರ. ಮೊದಲು ಹುಟ್ಟುವ ಮಗು ಗಂಡಾದರೆ ಮನೆಯವರಿಗೆಲ್ಲಾ ಖುಷಿ. ಒಂದು ವೇಳೆ ಎರಡೂ ಹೆಣ್ಣು ಮಕ್ಕಳು ಹುಟ್ಟಿದರೆ ಮನೆ ಅಕ್ಷರಶಃ ಕುರುಕ್ಷೇತ್ರ ವಾಗುತ್ತದೆ. ಅಲ್ಲಿ ಪ್ರೀತಿ ನೋಡಲು ಸಾಧ್ಯವಿಲ್ಲ. ಈಗಲೂ ಹೆಣ್ಣು ಮಕ್ಕಳೆಂದರೆ ಏಕೆ ಇಷ್ಟೊಂದು ತಾತ್ಸಾರ ಎಂಬುದನ್ನು ಎಲ್ಲರೂ ತಮ್ಮ ಒಳದನಿಗೆ ಕೇಳಿಕೊಳ್ಳುವಂತಾಗಬೇಕು ಎಂದರು.
ನಾಟಕದ ನಿರ್ದೇಶಕಿ ದಾಕ್ಷಾಯಿಣಿ ಭಟ್ ಮಾತನಾಡಿ, ನಾಟಕ ಭ್ರೂಣಹತ್ಯೆ ಜೊತೆಗೆ ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯವನ್ನು ಕೇಂದ್ರೀಕರಿಸುತ್ತದೆ ಎಂದರು.
ವೇದಿಕೆಯಲ್ಲಿ ಝೆನ್ ಟೀಮ್‍ನ ಉಗಮ ಶ್ರೀನಿವಾಸ್, ಬಾಲಭವನದ ಮಮತಾ ಇದ್ದರು.







