ಕೈಗಾರಿಕಾ ಕ್ಷ್ರೇತ್ರದಲ್ಲಿ ಡಿಜಿಟಲೀಕರಣದಿಂದ ಉದ್ಯಮ ರಂಗದ ವಿಸ್ತರಣೆ: ಅಚಲ್ ಎಂ.ಕೃಷ್ಣ

ಮಂಗಳೂರು, ಫೆ.12: ದೇಶದಲ್ಲಿ ಕೈಗಾರಿಕೆ 4.0 ತಾಂತ್ರಿಕತೆಯನ್ನೊಳಗೊಂಡ ಹೊಸ ಯೋಜನೆಯಿಂದ ಉದ್ಯಮ ರಂಗದ ವಿಸ್ತರಣೆಗೆ ಅವಕಾಶವಾಗಿದೆ ಎಂದು ಸ್ಮಾರ್ಟ್ ಕ್ಯಾಚ್ ನೆಟ್‌ವರ್ಕ್ ಪ್ರೈವೇಟ್ ಲಿ.ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಚಲ್ ಎಂ.ಕೃಷ್ಣ ತಿಳಿಸಿದ್ದಾರೆ.
ಮಂಗಳೂರು ಪ್ರೊಡಕ್ಟಿವ್ ಕೌನ್ಸಿಲ್ ವತಿಯಿಂದ ನಗರದ ಎಸ್‌ಡಿಎಂ ಕಾಲೇಜು ಸಭಾಂಗಣದಲ್ಲಿ ಇಂದು ಕೈಗಾರಿಕೆ 4.0 ಯೋಜನೆಯ ಅವಕಾಶಗಳ ಬಗ್ಗೆ ಉಪನ್ಯಾಸ ನೀಡಿದರು. ಇಂಡಸ್ಟಿ 4.0 ಯೋಜನೆ ಭಾರತದ ನಾಲ್ಕನೆ ಕ್ರಾಂತಿಕಾರಿ ಯೋಜನೆಯೆನ್ನಬಹುದು. ಇದರಿಂದ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದಂತಾಗುತ್ತದೆ. ಭಾರತದ ಪ್ರಧಾನಿಯ ಮೇಕ್ ಇನ್ ಇಂಡಿಯಾ ಯೋಜನೆಯ ಪ್ರಕಾರ ಡಿಜಿಟಲ್ ಇಂಡಿಯಾ ಕಾರ್ಯಕ್ರಮನಡೆಯುತ್ತಿದೆ. ಉದ್ಯಮ ಕ್ಷೇತ್ರದಲ್ಲಿ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಡಿಜಿಟಲ್ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವ ಯೋಜನೆ ಇದಾಗಿದೆ. ಪ್ರಸಕ್ತ ದೇಶದಲ್ಲಿ ಈ ರೀತಿಯ ತಂತ್ರಜ್ಞಾನದಿಂದ ಮಾರುಕಟ್ಟೆ, ಉದ್ಯಮ ಕ್ಷೇತ್ರ ವಿಸ್ತರಣೆಯಾಗಿದೆ. ಗ್ರಾಹಕರು ಆ್ಯಪ್‌ಗಳ ಮೂಲಕ ನೇರವಾಗಿ ಕಂಪೆನಿಗಳ ಉತ್ಸನ್ನಗಳನ್ನು ಕಡಿಮೆ ಬೆಲೆಗೆ ಖರೀದಿಸುವಂತಾಗಿದೆ. ನಗರದಲ್ಲಿ ಅಂಗಡಿ ಮಳಿಗೆಗಳಲ್ಲಿ ಇರುವ ವಸ್ತುಗಳ ಬೆಲೆಯನ್ನು ಆನ್‌ಲೈನ್ ಮೂಲಕ ಖರೀದಿಸಿದಾಗ ಸಿಗಬಹುದಾದ ಲಾಭಾಂಶವನ್ನು ತುಲನೆ ಮಾಡಿ ಸಾಮಾಗ್ರಿಗಳನ್ನು ಖರಿದೀಸುತ್ತಿದ್ದಾರೆ. ಇದರಿಂದ ಕಂಪೆನಿಗಳು ನೇರ ಮಾರಾಟದ ಪ್ರಯೋಜನವನ್ನು ಪಡೆಯುತ್ತಾರೆ. ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಪಡೆಯಲು ಸಾಧ್ಯವಾಗುತ್ತಿದೆ. ಸಿಬಿಎಸ್‌ಸಿ ಶಾಲಾ ಪಠ್ಯಕ್ಕೆ ಪೂರಕವಾದ ಶೈಕ್ಷಣಿಕ ಸಾಮಗ್ರಿಗಳು, ಕೃಷಿ ಪರಿಕರಗಳು, ಗ್ರಾಹಕರಿಗೆ ಬೇಕಾಗುವ ಇತರ ಪರಿಕರಗಳು ಈ ರೀತಿಯ ಡಿಜಿಟಲೀಕರಣದ ಮೂಲಕ ಸುಲಭವಾಗಿ ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ಕೈಗಾರಿಕಾ ರಂಗ ವಿಸ್ತಾರವಾಗಿ ಬೆಳೆಯಲು ಸಹಕಾರಿಯಾಗಿದೆ ಎಂದು ಅಚಲ್ ಕೃಷ್ಣ ತಿಳಿಸಿದ್ದಾರೆ.
ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕ್‌ನ ಎಜಿಎಂ ಶರತ್ ಚಂದ್ರ ಹೊಳ್ಳ ಉದ್ಘಾಟಿಸಿದರು. ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್‌ನ ಅಧ್ಯಕ್ಷ ರಾಮರಾವ್, ಕಾರ್ಯದರ್ಶಿ ಬಾಲಕೃಷ್ಣ ಸರಳಾಯ ಮೊದಲಾದವರು ಉಪಸ್ಥಿತರಿದ್ದರು.





