ಮಂಡ್ಯ: ಜಂತುಹುಳು ನಿರ್ಮೂಲನೆ ಕಾರ್ಯಕ್ರಮದ ಯಶಸ್ವಿಗೆ ಮನವಿ

ಮಂಡ್ಯ, ಫೆ.12: ರಾಷ್ಟ್ರೀಯ ಜಂತು ಹುಳು ನಿರ್ಮೂಲನಾ ದಿನದ ಅಂಗವಾಗಿ ಶಾಲಾ ಕಾಲೇಜುಗಳ ಮಕ್ಕಳಿಗೆ ಜಂತುಹುಳು ನಿರ್ಮಾಲನಾ ಮಾತ್ರೆ ನೀಡುತ್ತಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಶಿವಾನಂದ ಮನವಿ ಮಾಡಿದ್ದಾರೆ.
ನಗರದ ಅರಕೇಶ್ವರ ಬಡಾವಣೆಯ ಕುವೆಂಪು ಮಾದರಿ ದಶಮಾನೋತ್ಸವ ಪ್ರೌಢಶಾಲಾ ಆವರಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಫೆಬ್ರವರಿ ಹಾಗೂ ಆಗಸ್ಟ್ ತಿಂಗಳಿನಲ್ಲಿ ಮಕ್ಕಳಿಗೆ ಆಲ್ ಬೆಂಡಾಜೋಲ್ ಜಂತು ಹುಳು ನಿವಾರಣಾ ಮಾತ್ರೆ ನೀಡಲಾಗುತ್ತಿದೆ. ಇದರಿಂದ ಮಕ್ಕಳಲ್ಲಿನ ಅಪೌಷ್ಠಿಕತೆ ಹಾಗೂ ರಕ್ತಹೀನತೆಯನ್ನು ತೊಡೆದು ಹಾಕಬಹುದಾಗಿದೆ ಎಂದು ಅವರು ಹೇಳಿದರು.
ಇಡೀ ದೇಶದಲ್ಲಿ ಅಪೌಷ್ಠಿಕತೆ ಸಮಸ್ಯೆಯು ಹೆಚ್ಚಾಗಿದ್ದು, ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಜಂತುಹುಳು ನಿರ್ಮೂಲನ ದಿನದ ಆಚರಣೆ ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಜಂತುಹುಳು ನಿರ್ಮೂಲನೆಗೆ ಮಾತ್ರೆ ಸೇವಿಸುವುದು ಮಾತ್ರವಲ್ಲದೇ ಶೌಚಾಲಯಕ್ಕೆ ಹೋಗಿ ಬಂದ ನಂತರ ಹಾಗೂ ಊಟಕ್ಕೆ ಮುನ್ನ ಚನ್ನಾಗಿ ಕೈ ತೊಳೆಯುವ ಹವ್ಯಾಸವನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಪ್ರತಿ ಸೋಮವಾರದಂದು ಮಕ್ಕಳಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸುವ ಸಲುವಾಗಿ ಶಾಲೆಗಳಲ್ಲಿ ಮಾತ್ರೆಗಳನ್ನು ನೀಡಲಾಗುತ್ತಿದೆ. ಇದರಿಂದಲೂ ಮಕ್ಕಳಲ್ಲಿ ಅಪೌಷ್ಠಿಕತೆ ಹಾಗೂ ರಕ್ತಹೀನತೆ ಸಮಸ್ಯೆಯನ್ನು ನಿಗ್ರಹಿಸುವ ಕೆಲಸ ಕೆಲಸ ನಡೆಯುತ್ತಿದೆ ಎಂದು ಅವರು ವಿವರಿಸಿದರು.
ಆರ್‍ಸಿಎಚ್ ಅಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ ಮಾತನಾಡಿ, ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನದ ಅಂಗವಾಗಿ 1 ವರ್ಷದಿಂದ 19 ವರ್ಷದವರೆಗಿನ ಎಲ್ಲ ಅಂಗನವಾಡಿ ಕೇಂದ್ರ, ಸರಕಾರಿ, ಅನುದಾನಿತ, ಖಾಸಗಿ ಶಾಲೆಗಳು ಮತ್ತು ಕಾಲೇಜು ಮಕ್ಕಳಿಗೆ ಉಚಿತವಾಗಿ ಜಂತು ಹುಳು ಮಾತ್ರೆ ನೀಡಲಾಗುತ್ತದೆ ಎಂದರು. ಜಿಲ್ಲೆಯಲ್ಲಿ 3,37,226 ಮಕ್ಕಳು ನೊಂದಣಿಯಾಗಿದ್ದು, ಎಲ್ಲಾ ಮಕ್ಕಳಿಗೂ ಜಂತುಹುಳು ಮಾತ್ರೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲೆಗಳಿಗೆ ಗೈರಾದ ಮಕ್ಕಳಿಗೆ ಫೆ.17 ರಂದು ಮಾತ್ರೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪ್ರೇಮಕುಮಾರ್, ಡಿಎಚ್‍ಓ ಡಾ.ಕೆ.ಮೋಹನ್, ಡಾ.ಎಂ.ಸಿ.ರೋಚನಾ, ಡಾ.ಕೆ.ಪಿ.ಅಶ್ವತ್, ಡಾ.ಶ್ರೀಧರ್, ಡಾ.ಬಾಲಕೃಷ್ಣ, ಡಾ.ಶಶಿಧರ್ ಬಸವರಾಜು, ಡಾ.ಕೆ.ಜಿ.ಭವಾನಿಶಂಕರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಗಳ, ಇತರೆ ಜಿಲ್ಲಾಮಟ್ಟದ ಆಧಿಕಾರಿಗಳು ಹಾಜರಿದ್ದರು.







