ಸಿದ್ದರಾಮಯ್ಯರದ್ದು ಪರ್ಸೆಂಟೇಜ್ ಸರಕಾರ: ಕುಮಾರಸ್ವಾಮಿ

ಬೆಂಗಳೂರು,ಫೆ.13: ಪ್ರಧಾನಿ ಮೋದಿ ರಾಜ್ಯ ಸರಕಾರಕ್ಕೆ ಶೇ.10 ಪರ್ಸಂಟೇಜ್ ಸರಕಾರ ಎಂದು ಹೇಳಿದ್ದರಲ್ಲಿ ತಪ್ಪಿಲ್ಲ. ಆದರೆ ಅವರು ಹೇಳಿರುವುದು ಬಿಜೆಪಿ ಸರಕಾರದ ಅವಧಿಯ ಅಂಕಿ-ಅಂಶ. ಈ ಸರಕಾರದಲ್ಲಿ ಪರ್ಸಂಟೇಜ್ ಜಾಸ್ತಿಯಾಗಿದೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಬೆಂಗಳೂರಿನ ಸಮಾವೇಶದಲ್ಲಿ ರಾಜ್ಯ ಸರಕಾರದ್ದೆಂದು ಬಿಜೆಪಿ ಅಧಿಕಾರಾವಧಿಯ ಅಂಕಿ-ಅಂಶ ಹೇಳಿದ್ದರು. ಆದರೀಗ ರಾಜ್ಯ ಸರಕಾರದ ಪರ್ಸಂಟೇಜ್ ಜಾಸ್ತಿಯಾಗಿದೆ ಎಂದರು.
ರಸ್ತೆಗೆ ಚಿನ್ನದ ಲೇಪನ ಮಾಡ್ತಾರಾ?: ಉಕ್ಕಿನ ಸೇತುವೆ ಯೋಜನೆ ಕೈಬಿಟ್ಟದ್ದು, ಅದೇ ಕಂಪೆನಿಗೆ ಕೆಂಪೇಗೌಡ ಲೇಔಟ್ ಕಾಮಗಾರಿ ಗುತ್ತಿಗೆ ಬಗ್ಗೆ ನಾನು ಆಪಾದನೆ ಮಾಡೋ ಅವಶ್ಯಕತೆ ಇಲ್ಲ. ಮಾಧ್ಯಮದಲ್ಲಿ ಈಗಾಗಲೆ ವರದಿಯಾಗಿದೆ. ರಸ್ತೆ ನಿರ್ಮಾಣಕ್ಕೆ 1 ಕಿಲೋ ಮೀಟರ್ ಗೆ 38 ಕೋಟಿ ವೆಚ್ಚ ಮಾಡುತ್ತಿದ್ದಾರೆ. ಈ ರಸ್ತೆಗಳಿಗೆ ಬೆಳ್ಳಿ ಅಥವಾ ಚಿನ್ನದ ಲೇಪನ ಮಾಡುತ್ತಾರಾ ಎಂದು ಪ್ರಶ್ನಿಸಿದರು.
ಹೆಚ್ಚಿನ ಕಮಿಷನ್ ಆಸೆಗಾಗಿ ಹೊರ ರಾಜ್ಯದ ಗುತ್ತಿಗಾದರರಿಗೆ ಮಣೆ ಹಾಕಿ, ಗುತ್ತಿಗೆ ನೀಡಲಾಗುತ್ತಿದೆ. ಎಂ.ಬಿ. ಪಾಟೀಲ್, ಮಹದೇವಪ್ಪ ಹಾಗೂ ಸಿಎಂ ಈ ಬಗ್ಗೆ ಉತ್ತರ ನೀಡಬೇಕು. ನಮ್ಮ ರಾಜ್ಯದ ಎಷ್ಟು ಜನರಿಗೆ ಗುತ್ತಿಗೆ ನೀಡಿದ್ದೀರಾ? ಮಾಹಿತಿ ಬಹಿರಂಗ ಪಡಿಸಿ ಎಂದು ಸರಕಾರಕ್ಕೆ ಎಚ್‌ಡಿಕೆ ಸವಾಲೆಸೆದರು.
ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನಿದೆ?
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆ ವೇಳೆ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದಾರೆ, ತಪ್ಪೇನಿದೆ. ಕೆಲವು ದೇವರಿಗೆ ಮಾಂಸಾಹಾರವೇ ಪ್ರಿಯ. ಮನಸ್ಸು ಶುದ್ಧವಿಲ್ಲದೆ ದೇವಸ್ಥಾನಕ್ಕೆ ಹೋಗಿ ಏನು ಪ್ರಯೋಜನ. ಇದಕ್ಕೆ ನಾನು ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ. ನಮ್ಮ ದೇಹವೇ ಒಂದು ಮಾಂಸದ ಮುದ್ದೆ. ಹಾಗಾಗಿ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪಿಲ್ಲ.-ಹೆಚ್.ಡಿ ಕುಮಾರಸ್ವಾಮಿ







