ಮದರ್ ಪ್ಲಾನ್, ಅಭಿವೃದ್ಧಿ ಯೋಜನೆ ಎರಡೂ ಒಂದೆ ಆಗಿರಬೇಕು: ಹೈಕೋರ್ಟ್

ಬೆಂಗಳೂರು, ಫೆ.13: ಬೆಂಗಳೂರು ಮಹಾನಗರ ಅಭಿವೃದ್ಧಿಗೆ ಒಂದು ಮದರ್ ಪ್ಲಾನ್(ತಾಯಿ ಯೋಜನೆ) ಇರಬೇಕು. ಅದು ನಗರದ ಅಭಿವೃದ್ಧಿಗೆ ಸಂಬಂಧಿಸಿ ರೂಪಿಸುವ ಎಲ್ಲ ಯೋಜನೆಗಳನ್ನು ಕ್ರೋಡೀಕರಿಸಿರಬೇಕು. ನಗರದ ಅಭಿವೃದ್ಧಿಗೆ ರೂಪಿಸುವ ಯಾವುದೇ ಪ್ಲಾನ್ ಸಹ ಮದರ್ ಪ್ಲಾನ್‌ಗೆ ಅನುಗುಣವಾಗಿರಬೇಕು ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.
ಬೆಂಗಳೂರು ಮಹಾನಗರ ಅಭಿವೃದ್ಧಿಯ ರೂಪರೇಷ ನಿರ್ಧರಿಸುವ 2031ರ ಪರಿಷ್ಕೃತ ಮಾಸ್ಟರ್ ಪ್ಲಾನ್ ಪ್ರಶ್ನಿಸಿ ಸಿಟಿಜನ್ ಆ್ಯಕ್ಷನ್ ಪೋರಂ, ನಮ್ಮ ಬೆಂಗಳೂರು ಫೌಂಡೇಷನ್ ಹಾಗೂ ಇತರ ಸಂಸ್ಥೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಗಳ ಅರ್ಜಿ ವಿಚಾರಣೆ ನಡೆಸುತ್ತಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಸಂವಿಧಾನದ ಪರಿಚ್ಛೇಧ 243 ಝಡ್‌ಇಗೆ ವಿರುದ್ಧವಾಗಿ ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. 74ನೆ ಸಾಂವಿಧಾನಿಕ ತಿದ್ದುಪಡಿ ಆಶಯಕ್ಕೆ ವ್ಯತಿರಿಕ್ತವಾಗಿದೆ. ಈ ಯೋಜನೆಗೆ ಬೆಂಗಳೂರು ಮಹಾನಗರ ಯೋಜನಾ ಸಮಿತಿಯ ಸಮ್ಮತಿ ಪಡೆದಿಲ್ಲ. ಹೀಗಾಗಿ, ಅದು ಕಾನೂನು ಬದ್ಧವಾಗುವುದಿಲ್ಲ ಮತ್ತು ಕರಡು ಮಾಸ್ಟರ್ ಪ್ಲಾನ್ ಪ್ರಕಟಿಸಿ ಸರಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಎಷ್ಟು ಯೋಜನಾ ಪ್ರಾಧಿಕಾರಗಳು ಇವೆ. ಅವುಗಳು ರೂಪಿಸುವ ಎಲ್ಲ ಯೋಜನೆಗಳನ್ನು ಏಕೀಕರಿಸಿ ಹೇಗೆ ಮದರ್ ಪ್ಲಾನ್ ರಚಿಸಬಹುದು? ಎಂಬುದನ್ನು ನ್ಯಾಯಾಲಯವು ಮೊದಲು ಅರ್ಥಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು. ಹಾಗೆಯೇ, ನಗರದ ಅಭಿವೃದ್ಧಿ ರೂಪುರೇಷ ನಿರ್ಧರಿಸಲು ಒಂದು ಮದರ್ ಪ್ಲಾನ್ ಇರಬೇಕು. ಅದುವೇ ಅಭಿವೃದ್ಧಿ ಯೋಜನೆಯಾಗಿರಬೇಕು. ಮದರ್ ಪ್ಲಾನ್ ಹಾಗೂ ಅಭಿವೃದ್ಧಿ ಯೋಜನೆ ಎರಡೂ ಬೇರೆ ಬೇರೆಯಾಗಿರಬಾರದು. ನಗರದ ಅಭಿವೃದ್ಧಿಗೆ ರೂಪಿಸುವ ಯಾವುದೇ ಯೋಜನೆ ಸಹ ಮದರ್ ಪ್ಲಾನ್‌ಗೆ ಅನುಗುಣವಾಗಿಯೇ ಇರಬೇಕು ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತು.
ಅಲ್ಲದೆ, ದೇಶದ ಇತರೆ ರಾಜ್ಯಗಳು ತನ್ನ ನಗರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವ ರೀತಿಯ ಯೋಜನೆಗಳನ್ನು ರೂಪಿಸಿ ಜಾರಿ ಮಾಡಿವೆ? ಅಂತಹ ಯೋಜನೆಗಳ ಸಂಬಂಧ ಸ್ಥಳೀಯ ಹೈಕೋರ್ಟ್‌ಗಳು ಯಾವುದಾದರೂ ಆದೇಶಗಳನ್ನು ಹೊರಡಿಸಿವೆಯೇ? ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಎಷ್ಟು ಯೋಜನಾ ಪ್ರಾಧಿಕಾರಗಳು ಇವೆ? ಎಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು.
ಅರ್ಜಿದಾರರ ಪರ ವಕೀಲರು ಉತ್ತರಿಸಿ, ಬೆಂಗಳೂರು ನಗರ ಅಭಿವೃದ್ಧಿ ಸಂಬಂಧ ಬಿಎಂಆರ್‌ಡಿಎ, ಬಿಎಂಐಸಿಎಪಿಎ ಮತ್ತು ಬಿಬಿಎಂಪಿಯು ಯೋಜನಾ ಪ್ರಾಧಿಕಾರಗಳು. ಈಗಾಗಲೇ ಕೆಲ ರಾಜ್ಯಗಳು ತಮ್ಮ ನಗರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆ ರೂಪಿಸಿ ಜಾರಿ ಮಾಡಿವೆ. ಅಲ್ಲದೆ, ಈ ಬಗ್ಗೆ ನಿಖರ ಮಾಹಿತಿ ಪಡೆದು ಮುಂದಿನ ವಿಚಾರಣೆ ವೇಳೆ ತಿಳಿಸುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು. ನ್ಯಾಯಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.







