ಫೆ.16ರಿಂದ ಬಜೆಟ್ ಅಧಿವೇಶನ: ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ

ಬೆಂಗಳೂರು, ಫೆ. 13: ಬಜೆಟ್ ಅಧಿವೇಶನ ಇದೇ 16ರಿಂದ 28ರ (ಶನಿವಾರ ಮತ್ತು ರವಿವಾರ ಹೊರತುಪಡಿಸಿ) ವರೆಗೆ ನಡೆಯಲಿದ್ದು, ವಿಧಾನಸೌಧದ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್‌ಕುಮಾರ್ ಆದೇಶ ಹೊರಡಿಸಿದ್ದಾರೆ.
ಫೆ.16, ಫೆ.19ರಿಂದ 23 ಹಾಗೂ ಫೆ.26ರಿಂದ 28ರ ವರೆಗೆ ಬೆಳಗ್ಗೆ 6ಗಂಟೆಯಿಂದ ಮಧ್ಯರಾತ್ರಿ 12ಗಂಟೆಯ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಕಾನೂನುಭಂಗ ಉಂಟು ಮಾಡುವ ಉದ್ದೇಶದಿಂದ ಐದಕ್ಕಿಂತ ಹೆಚ್ಚು ಜನ ಗುಂಪು ಸೇರುವುದು, ಮೆರವಣಿಗೆ ಮತ್ತು ಸಭೆ ನಡೆಸುವುದು, ಶಸ್ತ್ರ, ದೊಣ್ಣೆ, ಕತ್ತಿ ಸೇರಿ ಮಾರಕಾಸ್ತ್ರಗಳ ಸಾಗಾಣೆ, ಸ್ಪೋಟಕ ವಸ್ತುಗಳ ಸಿಡಿಸುವುದು, ಪ್ರಚೋದನಕಾರಿ ಘೋಷಣೆ ಕೂಗುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
Next Story





