ನಾರಾಯಣ ಗುರುಗಳ ಸಂದೇಶ ಸಾರಲು ಬಿಲ್ಲವ ಸಮಾಜ ಯಾರಿಗೂ ಹೆದರುವುದಿಲ್ಲ: ಜನಾರ್ದನ ಪೂಜಾರಿ
'ಸಾಲ ಮೇಳದ ಸಂಗ್ರಾಮ' ಎರಡನೆ ಆವೃತ್ತಿ ಬಿಡುಗಡೆ

ಮಂಗಳೂರು, ಫೆ.13: ಬ್ರಹ್ಮ ಶ್ರೀ ನಾರಾಯಣ ಗುರುಗಳ ಸಂದೇಶ ಜಾಗತಿಕವಾಗಿ ಪ್ರಸಾರವಾಗಬೇಕಾಗಿದೆ. ಈ ಸಂದೇಶವನ್ನು ಸಾರಲು ಬಿಲ್ಲವ ಸಮಾಜ ಯಾರಿಗೂ ಹೆದರುವುದಿಲ್ಲ ಎಂದು ಮಾಜಿ ವಿತ್ತ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ಮಹಾ ಶಿವರಾತ್ರಿಯ ಸಂದರ್ಭದಲ್ಲಿ ತಮ್ಮ ಆತ್ಮಕಥೆ ಸಾಲ ಮೇಳದ ಸಂಗ್ರಾಮದ ಎರಡನೆ ಆವೃತ್ತಿಯನ್ನು ಅವರು ಇಂದು ಬಿಡುಗಡೆಗೊಳಿಸಿ ಮಾತನಾಡುತಿದ್ದರು.
ನನ್ನ ಆತ್ಮ ಕೃತಿಯಲ್ಲಿ ಹೇಳಿದ ಮಾತುಗಳು ಸತ್ಯ
ನನ್ನ ಆತ್ಮ ಕೃತಿಯಲ್ಲಿ ಹೇಳಿರುವ ಎಲ್ಲಾ ಮಾತುಗಳು ಸತ್ಯ ಎನ್ನುವುದನ್ನು ನಾನು ಶ್ರೀ ಕ್ಷೇತ್ರ ಕುದ್ರೋಳಿ ದೇವರ ಸನ್ನಿಧಿಯಲ್ಲಿ ಹೇಳುತ್ತಿದ್ದೇನೆ. ಯಾರಿಗೂ ನೋವು ಉಂಟು ಮಾಡಬೇಕೆಂಬ ಉದ್ದೇಶ ನನಗಿಲ್ಲ. ನಾವು ಯಾರಿಗೂ ನೋವು ಉಂಟು ಮಾಡುವುದಿಲ್ಲ ಎಂದು ಶಪಥ ಮಾಡಬೇಕಾಗಿದೆ ಎಂದು ಜನಾರ್ದನ ಪೂಜಾರಿ ತಿಳಿಸಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಎಲ್ಲಾ ಜಾತಿ, ಎಲ್ಲಾ ಮತ, ಧರ್ಮದವರನ್ನು ಒಂದೇ ಎಂದು ಸಾರಿದವರು .ಈ ಆದರ್ಶವನ್ನು ಜಾಗತಿಕವಾಗಿ ಸಾರಬೇಕಾಗಿದೆ. ಕುದ್ರೋಳಿಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರಿರುವ ಕಡೆ ನಾರಾಯಣ ಗುರುಗಳು ಈ ದೇವಸ್ಥಾನವನ್ನು ಸ್ಥಾಪಿಸಿ ಆದರ್ಶವನ್ನು ಹಾಕಿ ಕೊಟ್ಟಿದ್ದಾರೆ ಎಂದು ಪುಜಾರಿ ಹೇಳಿದರು.
ನನ್ನ ತಾಯಿಗೆ ಕೆಟ್ಟ ರೀತಿಯಲ್ಲಿ ಬೈದವರಿಗೂ ಒಳ್ಳೆಯದಾಗಲಿ ಎಂದಿದ್ದೇನೆ
ಅರುಣ್ ಕುವೆಲ್ಲೋ ಅವರು ಹಾಗೂ ಅವರ ಕುಟುಂಬದವರನ್ನು ಸನ್ಮಾನಿಸಿದ ಜನಾರ್ದನ ಪೂಜಾರಿ ನಂತರ ಮಾತನಾಡುತ್ತಾ, ಇವರು ಸತ್ಯದ ಪರವಾಗಿ ನಿಂತವರು. ನನ್ನ ತಾಯಿಗೆ ಈ ಜಿಲ್ಲೆಯ ದೊಡ್ಡ ವ್ಯಕ್ತಿಯೊಬ್ಬರು ವಿಮಾನ ನಿಲ್ದಾಣದಲ್ಲಿ ಹಾಗೂ ಮದುವೆ ಸಮಾರಂಭದಲ್ಲಿ ಕೆಟ್ಟ ಪದ ಬಳಸಿ ಬೈದಿದ್ದಾರೆ ಎನ್ನುವ ಸುದ್ದಿ ಸಿಕ್ಕಿತು. ಇವರ ಬಳಿ ಕೇಳಿದೆ ಆಗ ಅರುಣ್ ಕುವೆಲ್ಲೋ ಆ ವ್ಯಕ್ತಿ ಬೈದದ್ದು ಹೌದು ಎಂದಿದ್ದಾರೆ. ಆದರೆ ನಾನು ನನ್ನ ತಾಯಿಗೆ ಬೈದ ದೊಡ್ಡ ವ್ಯಕ್ತಿಗೆ ಒಳ್ಳೆದಾಗಲಿ ಎಂದು ಹರಸಿದ್ದೇನೆ ಎಂದು ತಿಳಿಸಿದರು.
ಕೆಲವರು ಗೋಕರ್ಣನಾಥನನ್ನು ಮರೆತರು
ಈ ಹಿಂದೆ ಪ್ರತಿ ಶಿವರಾತ್ರಿಯ ದಿನ ಕುದ್ರೋಳಿಗೆ ಬಂದು ಶಿವರಾತ್ರಿಯ ಜಾಗರಣೆಯಲ್ಲಿ ಭಾಗವಹಿಸಿ ಮರುದಿನ ಪ್ರಸಾದ ಸ್ವೀಕರಿಸಿ ಹೋಗುತ್ತಿದ್ದ ಸುಮಾವಸಂತ್ (ಮಾಜಿ ಸಚಿವೆ )ಈ ಬಾರಿ ಬಂದಿಲ್ಲಾ ಎನ್ನುವುದು ನನಗೆ ನೋವಾಗಿದೆ. ಅವರು ಈ ದೇವರ ಆಶೀರ್ವಾದದಿಂದ ಸಚಿವೆಯಾಗಿದ್ದಾರೆ. ಈಗ ಅವರು ಕೊದ್ರೋಳಿಯ ಗೋಕರ್ಣನಾಥನನ್ನು ಮರೆತರೆ ಎನ್ನುವ ಸಂದೇಹ ಬರುತ್ತಿದೆ ಎಂದು ಆಗಮಿಸಿದ್ದ ಕುಟುಂಬದ ಸದಸ್ಯರ ಸಮ್ಮಖದಲ್ಲಿ ತಿಳಿಸಿದರು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ದೇವಸ್ಥಾನದ ಅರ್ಚಕರಾದ ಲೋಕೇಶ್ ಶಾಂತಿ ಹಾಗೂ ಲಕ್ಷ್ಮಣ ಶಾಂತಿ ನೇತೃತ್ವದಲ್ಲಿ ದೇವರ ಮುಂದೆ ಪುಸ್ತಕ ಇಟ್ಟು ವಾದ್ಯ ಘೋಷಗಳೊಂದಿಗೆ ಪುಸ್ತಕ ಬಿಡುಗಡೆಗೊಳಿಸಿದರು.
ಎರಡನೆ ಆವೃತ್ತಿಯಲ್ಲಿ 5 ಸಾವಿರ ಪ್ರತಿ ಮುದ್ರಿಸಲಾಗಿತ್ತು. ಸಮಾರಂಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಎಚ್.ಎಸ್. ಸಾಯಿರಾಮ್, ರಾಘವೇಂದ್ರ ಕೂಳೂರು, ರವಿಶಂಕರ ಮಿಜಾರ್, ದೇವೇಂದ್ರ ಪೂಜಾರಿ, ಮಾದವ ಸುವರ್ಣ, ಶೇಖರ ಪೂಜಾರಿ, ಪದ್ಮರಾಜ್, ಡಾ.ಬಿ.ಜಿ.ಸುವರ್ಣ, ಡಾ.ಅನಸೂಯ, ಮಾಲತಿ ಪೂಜಾರಿ, ಮನಪಾ ಮೇಯರ್ ಕವಿತಾ ಸನಿಲ್ ಮೊದಲಾದವರು ಉಪಸ್ಥಿತರಿದ್ದರು.
ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.







