ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ವಿರೋಧಿಸಿ ಕಣ್ಣೂರಿನಲ್ಲಿ 12 ಗಂಟೆಗಳ ಬಂದ್

ಕಣ್ಣೂರು,ಫೆ.13: ಸೋಮವಾರ ರಾತ್ರಿ ಕಣ್ಣೂರು ಜಿಲ್ಲೆಯಲ್ಲಿ ತನ್ನ ಕಾರ್ಯಕರ್ತ ಎಸ್.ವಿ.ಶುಹೈಬ್(30) ಹತ್ಯೆಯನ್ನು ವಿರೋಧಿಸಿ ಕಾಂಗ್ರೆಸ್ ಮಂಗಳವಾರ ಕಣ್ಣೂರಿನಲ್ಲಿ 12 ಗಂಟೆಗಳ ಹರತಾಳಕ್ಕೆ ಕರೆ ನೀಡಿತ್ತು. ಆಡಳಿತ ಸಿಪಿಎಂ ಕಾರ್ಯಕರ್ತರಿಂದ ಈ ಹತ್ಯೆ ನಡೆದಿದೆ ಎಂದು ಅದು ಆರೋಪಿಸಿದೆ.
ಸಿಪಿಎಂ ಅನ್ನು ಕಟುವಾಗಿ ಟೀಕಿಸಿರುವ ಕೇರಳ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ, ಕಾಂಗ್ರೆಸ್‌ನ ರಮೇಶ ಚೆನ್ನಿತ್ತಲ ಅವರು, ಅದು ರಾಜ್ಯದಲ್ಲಿ ‘ಕೆಂಪು ಕಾರಿಡಾರ್’ ಸೃಷ್ಟಿಸಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಮತ್ತು ಆರೆಸ್ಸೆಸ್ ಸಾಮಾನ್ಯವಾಗಿ ಸಿಪಿಎಂ ವಿರುದ್ಧ ಈ ವಿಶೇಷಣವನ್ನು ಬಳಸುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ಕಣ್ಣೂರು ಜಿಲ್ಲೆ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರು ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಅನೇಕ ಹಿಂಸಾತ್ಮಕ ಸಂಘರ್ಷಗಳಿಗೆ ಸಾಕ್ಷಿಯಾಗಿದೆ.
ಸೋಮವಾರ ರಾತ್ರಿ ಯುವ ಕಾಂಗ್ರೆಸ್‌ನ ಮಟ್ಟನ್ನೂರಿನ ಸ್ಥಳೀಯ ಪದಾಧಿಕಾರಿ ಶುಹೈಬ್ ಮೇಲೆ ಗುಂಪೊಂದು ಮಾರಕಾಯುಧಗಳಿಂದ ಹಲ್ಲೆ ನಡೆಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರೆಳೆದಿದ್ದರು. ಕೆಲವು ವಾರಗಳ ಹಿಂದೆ ಸಿಪಿಎಂನ ಎಸ್‌ಎಫ್‌ಐ ಮತ್ತು ಕಾಂಗ್ರೆಸ್‌ನ ಕೇರಳ ಸ್ಟೂಡೆಂಟ್ಸ್ ಯೂನಿಯನ್ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿದ್ದವು. ಇದರಲ್ಲಿ ಭಾಗಿಯಾಗಿದ್ದಕ್ಕಾಗಿ ಶುಹೈಬ್‌ರನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸುಹೈಬ್ ಹತ್ಯೆಯ ಹಿಂದೆ ತನ್ನ ಪಕ್ಷದ ಕೈವಾಡವಿರುವುದನ್ನು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಪಿ.ಜಯರಾಜನ್ ಅವರು ತಿರಸ್ಕರಿಸಿದ್ದಾರೆ.







