ಮಾ.4: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಏಕತಾ ಸಮಾವೇಶ
ದೇಶ ನಿರ್ಮಾಣಕ್ಕಾಗಿ ಸಮುದಾಯದ ಸಬಲೀಕರಣ
ಉಡುಪಿ, ಫೆ.13: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ದೇಶ ನಿರ್ಮಾಣಕ್ಕಾಗಿ ಸಮುದಾಯದ ಸಬಲೀಕರಣ ಧ್ಯೇಯವಾಕ್ಯದೊಂದಿಗೆ ಏಕತಾ ಸಮಾವೇಶವನ್ನು ಮಾ.4ರಂದು ಸಂಜೆ 3:30ರಿಂದ ರಾತ್ರಿ 10ಗಂಟೆಯ ವರೆಗೆ ಉಡುಪಿ ಬೀಡಿನಗುಡ್ಡೆ ಮಹಾತ್ಮ ಗಾಂಧಿ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಉಡುಪಿ ಜಿಲ್ಲಾ ಖಾಝಿ ಅಲ್‌ಹಾಜ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ದುವಾ ನೆರವೇರಿಸಿ ಚಾಲನೆ ನೀಡಲಿರುವರು.
ಇತ್ತಿಹಾದೆ ಮಿಲ್ಲತ್ ಕೌನ್ಸಿಲ್‌ನ ಅಧ್ಯಕ್ಷ ಹಾಗೂ ಅಹ್ಲೆ ಸುನ್ನತ್ ವಲ್ ಜಮಾಅತ್‌ನ ಪ್ರಖ್ಯಾತ ವಿದ್ವಾಂಸ ಅಹ್ಮದ್ ರಝಾ ಖಾನ್ ಅವರ ಮೊಮ್ಮಗ ಮೌಲಾನ ತೌಖೀರ್ ರಝಾ ಖಾನ್ ಉದ್ಘಾಟನಾ ಭಾಷಣ ಮಾಡಲಿರುವರು. ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್ ಯಾಸೀನ್ ದಿಕ್ಸೂಚಿ ಭಾಷಣ ಮಾಡ ಲಿರುವರು. ಮಂಗಳೂರು ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಸಮಾರೋಪ ಭಾಷಣ ಮಾಡಲಿರುವರು.
ಮುಖ್ಯ ಅತಿಥಿಗಳಾಗಿ ಅಜ್ಮೀರ್ ಖಾಜಾ ಮೊಹಿಯುದ್ದೀನ್ ಚಿಶ್ತಿ ದರ್ಗಾದ ಸಜ್ಜಾದ್‌ನಶೀನ್ ವ ದಿವಾನ್ ಹಝ್ರತ್ ಚಿಶ್ತಿ ದಿವಾನ್ ಸೈಯದ್ ಝೈನುಲ್ ಆಬಿದೀನ್, ತಬ್ಲೀಗ್ ಜಮಾಅತ್‌ನ ನಾಯಕ ಹಾಗೂ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ ವಕ್ತಾರ ಮೌಲಾನ ಸಜ್ಜಾದ್ ನೋಮಾನಿ, ಜಮೀಯ್ಯತೆ ಅಹ್ಲೆ ಹದೀಸ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಶೇಖ್ ಅಸ್ಗರ್ ಅಲಿ ಇಮಾಮ್ ಮೆಹ್ದಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಇ.ಅಬೂಬಕರ್, ಜಅಮಾತೆ ಇಸ್ಲಾಮೀ ಹಿಂದ್‌ನ ರಾಷ್ಟ್ರೀಯ ಉಪಾಧ್ಯಕ್ಷ ಸೈಯದ್ ಸಆದತುಲ್ಲಾ ಹುಸೈನಿ, ವಾರ್ತಾಭಾರತಿಯ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಭಾಗವಹಿಸಲಿರುವರು.
ವಿವಿಧ ವಿಚಾರಧಾರೆಯ ಮುಸ್ಲಿಮ್ ಸಮುದಾಯದ ರಾಷ್ಟ್ರಮಟ್ಟದ ನಾಯಕ ರನ್ನು ಒಂದೇ ವೇದಿಕೆಯಲ್ಲಿ ಸೇರಿಸುವುದರೊಂದಿಗೆ ಇದು ಮೊತ್ತ ಮೊದಲ ಐತಿಹಾಸಿಕ ಸಮಾವೇಶ ಆಗಿ ಮೂಡಿಬರಲಿದೆ. ಮುಸ್ಲಿಮ್ ಸಮುದಾಯವನ್ನು ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸಬಲೀಕರಣ ಗೊಳಿಸುವ ಮೂಲಕ ದೇಶ ನಿರ್ಮಾಣ ಮಾಡುವ ಉದ್ದೇಶವನ್ನು ಈ ಸಮಾವೇಶ ಹೊಂದಿದೆ ಎಂದು ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಸೈನ್ ಕೋಡಿಬೆಂಗ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







