ಪುಸ್ತಕ ಮಾರಾಟ ಮಾಡಿಕೊಡುವಂತೆ ಉದ್ಯಮಿಗೆ ಬೆದರಿಕೆ
ಸಂಘ ಪರಿವಾರದ ಕಾರ್ಯಕರ್ತನೆನ್ನಲಾದ ವ್ಯಕ್ತಿಯ ವಿರುದ್ಧ ದೂರು

ಮಂಗಳೂರು, ಫೆ.13: ನಗರದ ಉದ್ಯಮಿಯೊಬ್ಬರಿಗೆ ಶ್ರೀರಾಮಸೇನೆಯ ಕಾರ್ಯಕರ್ತನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಪುಸ್ತಕಗಳನ್ನು ಮಾರಾಟ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದಲ್ಲದೆ ಮಾರಿ ಕೊಡದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಟ್ರಾನ್ಸ್‌ಪೋರ್ಟ್ ಕಂಟ್ರಾಕ್ಟರ್ ಆ್ಯಂಡ್ ಏಜೆನ್ಸಿ ಅಸೋಸಿಯೇಶನ್‌ನ ಅಧ್ಯಕ್ಷ ಚಿತ್ತರಂಜನ್ ಎಂಬವರಿಗೆ ಮೊಬೈಲ್ ಫೋನ್‌ನಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ‘ತಾನು ಶ್ರೀ ರಾಮಸೇನೆ ಕಾರ್ಯಕರ್ತ. ಕೆಲವು ಪುಸ್ತಕಗಳನ್ನು ನಿಮಗೆ ಕೊಡುತ್ತೇನೆ. ಅದನ್ನು ಸ್ಥಳೀಯ ಲಾರಿಯವರಿಗೆ ಇಷ್ಟು ಮೊತ್ತಕ್ಕೆ, ಹೊರ ರಾಜ್ಯ ಮತ್ತು ಜಿಲ್ಲೆಯ ಲಾರಿಯವರಿಗೆ ಇಂತಿಷ್ಟು ಮೊತ್ತಕ್ಕೆ ಮಾರಾಟ ಮಾಡಬೇಕು. ಇಲ್ಲದಿದ್ದರೆ ನಿನ್ನನ್ನು ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಇದರಿಂದ ಆತಂಕಗೊಂಡ ಚಿತ್ತರಂಜನ್ ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ.





