ಯಾಸಿನ್ ಭಟ್ಕಳ ವಿರುದ್ಧ ಆರೋಪ ರೂಪಿಸಿದ ನ್ಯಾಯಾಲಯ
2008ರ ದಿಲ್ಲಿ ಸರಣಿ ಸ್ಫೋಟ ಪ್ರಕರಣ

ಹೊಸದಿಲ್ಲಿ,ಫೆ.13: 2008ರಲ್ಲಿ ದಿಲ್ಲಿಯನ್ನು ನಡುಗಿಸಿದ್ದ ಸರಣಿ ಸ್ಫೋಟಗಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಇಂಡಿಯನ್ ಮುಜಾಹಿದೀನ್‌ನ ಸಹಸ್ಥಾಪಕ ಯಾಸಿನ್ ಭಟ್ಕಳ ಮತ್ತು ಆತನ ಸಹಚರ ಅಸಾದುಲ್ಲಾ ಅಖ್ತರ್ ವಿರುದ್ಧ ಮಂಗಳವಾರ ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಆರೋಪಗಳನ್ನು ರೂಪಿಸಿದೆ. ಈ ಸ್ಫೋಟಗಳಲ್ಲಿ 26 ಜನರು ಮೃತಪಟ್ಟು 135 ಜನರು ಗಾಯಗೊಂಡಿದ್ದರು.
ನ್ಯಾ.ಸಿದ್ಧಾರ್ಥ ಶರ್ಮಾ ಅವರು ಅಕ್ರಮ ಚಟುವಟಿಕೆಗಳ(ತಡೆ) ಕಾಯ್ದೆ, ಐಪಿಸಿ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಆರೋಪಿಗಳ ವಿರುದ್ಧ ವಿಚಾರಣೆಯನ್ನು ಆದೇಶಿಸಿದರು. ಪ್ರಕರಣವು ದಿಲ್ಲಿಯ ಗ್ರೇಟರ್ ಕೈಲಾಷ್-1ರಲ್ಲಿ ಸಂಭವಿಸಿದ್ದ ಅವಳಿ ಸ್ಫೋಟಗಳಿಗೆ ಸಂಬಂಧಿಸಿದ್ದು, ಇವುಗಳಲ್ಲಿ ಒಂಭತ್ತು ಜನರು ಗಾಯಗೊಂಡಿದ್ದರು.
ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಫೆ.28ಕ್ಕೆ ನಿಗದಿಗೊಳಿಸಿತು.
2013,ಆ.28ರಂದು ರಾತ್ರಿ ಭಾರತ-ನೇಪಾಳ ಗಡಿಯ ಸಮೀಪ ಭಟ್ಕಳ್‌ನನ್ನು ಎನ್‌ಐಎ ಬಂಧಿಸಿತ್ತು. ಬಳಿಕ ಗ್ರೇಟರ್ ಕೈಲಾಷ್-1ರಲ್ಲಿಯ ಸ್ಫೋಟ ಪ್ರಕರಣದಲ್ಲಿ ದಿಲ್ಲಿ ಪೊಲೀಸರು ಆತನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.
ಭಟ್ಕಳ ಮತ್ತು ಅಖ್ತರ್ ಅವರು ಇತರರೊಂದಿಗೆ ಸೇರಿಕೊಂಡು 2008,ಸೆ.13ರಂದು ದಿಲ್ಲಿಯ ವಿವಿಧೆಡೆಗಳಲ್ಲಿ ಸ್ಫೋಟಗಳನ್ನು ನಡೆಸುವ ಸಂಚು ರೂಪಿಸಿದ್ದರು. ಭಯೋತ್ಪಾದಕ ದಾಳಿಗಳನ್ನು ನಡೆಸುವ ಮೂಲಕ ಭಾರತದ ವಿರುದ್ಧ ಯುದ್ಧ ಸಾರಿದ್ದರು ಎಂದು ಪೊಲೀಸರು ಆರೋಪಿಸಿದ್ದರು.







