ವೈಚಾರಿಕ ಮನೋಭಾವ ಬೆಳೆಸುವಲ್ಲಿ ದಲಿತ ವಚನಕಾರರ ಪಾತ್ರ ಹಿರಿದು: ಶಾಸಕ ಕೆ.ಬಿ.ಪ್ರಸನ್ನಕುಮಾರ್

ಶಿವಮೊಗ್ಗ, ಫೆ. 13: ಸಮಾಜದಲ್ಲಿದ್ದ ಪಿಡುಗುಗಳ ವಿರುದ್ಧ ಧ್ವನಿ ಎತ್ತಿ, ಜನರಲ್ಲಿ ವೈಚಾರಿಕ ಮನೋಭಾವ ಬೆಳೆಸುವಲ್ಲಿ ದಲಿತ ವಚನಕಾರರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಸ್ಪೃಶ್ಯತೆ, ಸ್ತ್ರೀ ವಿಚಾರಗಳು, ಜಾತಿತಾರತಮ್ಯ, ಮೇಲುಕೀಳು ಹೀಗೆ ನಾನಾ ಸಾಮಾಜಿಕ ಪಿಡುಗಗಳ ವಿರುದ್ಧ ಧ್ವನಿ ಎತ್ತಿ ಜನರಲ್ಲಿ ವೈಚಾರಿಕ ಮನೋಭಾವನೆ ಬೆಳೆಸುವಲ್ಲಿ ದಲಿತ ವಚನಕಾರರ ಪಾತ್ರ ಮುಖ್ಯವಾಗಿದೆ. ತಮ್ಮ ವೃತ್ತಿ ಜೊತೆಗೆ ಸಮಾಜವನ್ನು ತಿದ್ದುವ ಕೆಲಸ ಮಾಡುವಲ್ಲಿ ವಚನಕಾರರು ಪ್ರಯತ್ನಪಟ್ಟರು. 12 ನೇ ಶತಮಾನದಲ್ಲಿಯೇ ಸಮಾಜದಲ್ಲಿನ ಅನ್ಯಾಯ ಅಸಮಾನತೆ ವಿರುದ್ಧ ವಚನಗಳನ್ನು ರೂಪಿಸುವ ಮೂಲಕ ಸಮಾಜವನ್ನು ಒಗ್ಗೂಡಿಸುವ ಪ್ರಾಮಾಣಿಕ ಪ್ರಯತ್ನಪಟಿದ್ದಾರೆ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಸಹ್ಯಾದ್ರಿ ಕಲಾ ಕಾಲೇಜಿನ ಉಪನ್ಯಾಸಕ ಡಾ.ಮೇಟಿ ಮಲ್ಲಿಕಾರ್ಜುನ, ಸಮಾಜದಲ್ಲಿನ ಅಸಮಾನತೆ, ಅನ್ಯಾಯದ ವಿರುದ್ಧ ದ್ವನಿ ಎತ್ತಿ ಸಾಮಾಜಿಕ ಸಮಾನತೆಗಾಗಿ ಧ್ವನಿ ಎತ್ತಿದವರು ದಲಿತ ವಚನಕಾರರು ಎಂದು ತಿಳಿಸಿದರು. ದಲಿತ ವಚನಕಾರರು 12ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಹಲವಾರು ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡಿ ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವಲ್ಲಿ ಮುಂದಾದರು. ಅರಿವಿನ ಕ್ರಾಂತಿಯಾಗಬೇಕು, ಅರಿವಿಲ್ಲದೇ ಬದುಕಲು ಸಾಧ್ಯವಿಲ್ಲ ಎಂದರು. ಪ್ರತಿಯೊಬ್ಬರು ವೈಚಾರಿಕ ಪ್ರಜ್ಞೆ ಬೆಳೆಸಿಕೊಂಡಾಗ ಮಾತ್ರ ಉತ್ತಮ ಸಮಾಜ ರೂಪುಗೊಳ್ಳಲು ಸಾಧ್ಯ ಎಂದು ವಚನಕಾರರು ಪ್ರತಿಪಾದಿಸಿದರು. ದಲಿತ ವಚನಕಾರರಿಂದ ದಲಿತ ಸಾಹಿತ್ಯ ಸಂವೇದನೆ, ಸಮಾನತೆಯ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು ಎಂದು ಹೇಳಿದರು.
ಜನರು ಬದುಕಲೆಂದು ವಚನಕಾರರು ವಚನಗಳನ್ನು ರೂಪಿಸಿದರು. ವಚನಗಳ ಮೂಲಕ ಜನರ ಅಸ್ತಿತ್ವ ನಿರ್ಧರಿಸುವ ನೆಲೆ ಕಂಡುಕೊಂಡರು. ಅವರಿಗೆ ಜನ ಮುಖ್ಯವಾಗಿತ್ತೇ ಹೊರತು ಯಾವುದೇ ಸ್ವಾರ್ಥ ಹಿತಾಸಕ್ತಿ ಮುಖ್ಯವಾಗಿರಲಿಲ್ಲ. ಇಂದು ದಲಿತ ಸಮಾಜ ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಲು ಅಂದಿನ ದಲಿತ ವಚನಕಾರರ ಪ್ರಾಮಾಣಿಕ ಪ್ರಯತ್ನವೇ ಕಾರಣ. ಭಾರತದಲ್ಲಿ ಪ್ರಜಾಸತತ್ಮಾಕ ರಾಷ್ಟ್ರ ನಿರ್ಮಾಣವಾಗುವುದಕ್ಕೆ ದಲಿತರು, ಹಿಂದುಳಿದವರೇ ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.







