ಮಡಿಕೇರಿ: ಫೆ.15ರಂದು 'ನಂಗಡ ಪದ್ಧತಿ' ಕೃತಿ ಬಿಡುಗಡೆ

ಮಡಿಕೇರಿ,ಫೆ.13: ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ರಚಿಸಿದ 'ನಂಗಡ ಪದ್ಧತಿ, ಕುಂಞ ಪುಟ್ಟ್ ನಲ್ಲಿ’ ಎಂಬ ಅಧ್ಯಯನ ಕೃತಿ ಕೊಡವ ಮಕ್ಕಡ ಕೂಟದ ವತಿಯಿಂದ ಫೆ. 15 ರಂದು ಲೋಕಾರ್ಪಣೆಗೊಳ್ಳಲಿದೆ.
ಅಂದು ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಕೊಡವ ಮಕ್ಕಡ ಕೂಟ ಹಾಗೂ ಕೊಡವ ಸಮಾಜಗಳ ಒಕ್ಕೂಟದ ಪೊಮ್ಮಕ್ಕಡ ಸಂಘದ ವತಿಯಿಂದ ನಡೆಯುವ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ.
ಈ ಸಮಾರಂಭ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ. ಕೊಡವ ಸಮಾಜ ಒಕ್ಕೂಟ ಪೊಮ್ಮಕ್ಕಡ ಸಂಘದ ಅಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಲಿದ್ದಾರೆ.
ಐತಿಚಂಡ ರಮೇಶ್ ಉತ್ತಪ್ಪ ಅವರ 20ನೇ ಕೃತಿಯಾಗಿ `ನಂಗಡ ಪದ್ಧತಿ, ಕುಂಞ ಪುಟ್ಟ್ ನಲ್ಲಿ’ ಹೊರಬರುತ್ತಿದೆ. ಕೊಡವರಲ್ಲಿ ಸ್ತ್ರೀಯರಿಗೆ ಇರುವ ಗೌರವ, ಪ್ರಾಮುಖ್ಯತೆ, ಪದ್ಧತಿಯಲ್ಲಿ ಅವರಿಗೆ ಇರುವ ಸ್ಥಾನ, ಅವರ ವಿವಾಹ, ಗರ್ಭಿಣಿಯರಿಗೆ `ಕೂಪದಿ’ ತೆಗೆದುಕೊಂಡು ಹೋಗುವ ಪದ್ಧತಿ, ಬಾಣಂತಿ ಹಾಗೂ ಮಗುವಿನ ಆರೈಕೆ, ಅದಕ್ಕೆ ಬಳಸುತ್ತಿದ್ದ ನಾಡ ಔಷಧಿ, ಕೊಡವರಲ್ಲಿ ಆರೈಕೆಯಲ್ಲಿನ ವಿಶೇಷ, ನಾಮಕರಣ, ಕೊಡವರಲ್ಲಿ ಮಕ್ಕಳು ಬೆಳೆಯುವ ರೀತಿ ಮುಂತಾದ ವಿಷಯಗಳ ಕುರಿತು ಅಧ್ಯಯನ ನಡೆಸಿ ಈ ಕೃತಿಯನ್ನು ರಚಿಸಿದ್ದಾರೆ ಎಂದು ಕೊಡವ ಮಕ್ಕಡ ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ತಿಳಿಸಿದ್ದಾರೆ.
ದ್ವಿತೀಯ ಮುದ್ರಣ: ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಕುರಿತು ಐತಿಚಂಡ ರಮೇಶ್ ಉತ್ತಪ್ಪ ರಚಿಸಿದ `1965ರ ಯುದ್ಧ ಹಾಗೂ ಕೊಡಗಿನ ಮಹಾವೀರ’ ಕೃತಿಯ ದ್ವಿತೀಯ ಮುದ್ರಣ ಕೂಡ ಇದೇ ಸಂದರ್ಭ ಬಿಡುಗಡೆಗೊಳ್ಳಲಿದೆ. ಮೊದಲ ಮುದ್ರಣದ ಪ್ರತಿಗಳು ಖಾಲಿಯಾಗಿದ್ದು, ಜನರ ಕೋರಿಕೆ ಮೇರೆಗೆ ದ್ವಿತೀಯ ಮುದ್ರಣ ಕಾಣುತ್ತಿದೆ ಎಂದು ಅವರು ತಿಳಿಸಿದ್ದಾರೆ.





