ಮಡಿಕೇರಿ: ಎಂ.ಎಸ್.ನಂದಕುಮಾರ್ ಗೆ ಡಿಸಿಸಿ ನೋಟೀಸ್
ಮಡಿಕೇರಿ,ಫೆ.13 : ಇತ್ತೀಚೆಗೆ ಸೋಮವಾರಪೇಟೆಯಲ್ಲಿ ಒಂದು ವರ್ಗಕ್ಕೆ ನೋವುಂಟು ಮಾಡುವ ರೀತಿಯಲ್ಲಿ ಮಾತನಾಡಿದ ಆರೋಪ ಎದುರಿಸುತ್ತಿರುವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದ ಎಂ.ಎಸ್.ನಂದಕುಮಾರ್ ಅವರನ್ನು “ಪಕ್ಷದಿಂದ ನಿಮ್ಮನ್ನು ಯಾಕೆ ಅಮಾನತು ಮಾಡಬಾರದು” ಎಂದು ಕಾರಣ ಕೇಳಿ ನೋಟೀಸ್ ನೀಡಲು ಪಕ್ಷ ನಿರ್ಧರಿಸಿದೆ ಎಂದು ಡಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಮುಸ್ಲಿಂ ಸಮುದಾಯದ ಕೆಲವರು ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದ ಹಿನ್ನೆಲೆಯಲ್ಲಿ ಇಂದು ಡಿಸಿಸಿ ಜಿಲ್ಲಾಧ್ಯಕ್ಷರಾದ ಶಿವುಮಾದಪ್ಪರ ಅಧ್ಯಕ್ಷತೆಯಲ್ಲಿ ಪಕ್ಷದ ಪ್ರಮುಖರ ತುರ್ತು ಸಭೆ ನಡೆಸಿ ಎಂ.ಎಸ್.ನಂದಕುಮಾರ್ ಅವರಿಗೆ ನೋಟೀಸ್ ನೀಡಲು ಮತ್ತು ಈ ವಿಚಾರವನ್ನು ಕೆಪಿಸಿಸಿ ಗಮನ ಸೆಳೆಯಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ಮೂರು ದಿನಗಳೊಳಗೆ ಸೂಕ್ತ ಸಮಜಾಯಿಷಿ ನೀಡಲು ನೋಟೀಸ್‍ನಲ್ಲಿ ಸೂಚಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಮಿಟ್ಟುಚಂಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಇಬ್ರಾಹಿಂ, ಕೆ.ಪಿ.ಚಂದ್ರಕಲಾ, ಕಾರ್ಯದರ್ಶಿ ಸಿ.ಎಸ್.ಅರುಣ್ ಮಾಚಯ್ಯ, ಸದಸ್ಯರಾದ ಟಿ.ಪಿ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.





