ಸುಶೀಲ ಶರ್ಮಾ ಅಪಹರಣ ಪ್ರಕರಣ: ಗೃಹ ಇಲಾಖೆ, ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಫೆ.14: ಅಮೃತಹಳ್ಳಿ ಠಾಣಾ ವ್ಯಾಪ್ತಿಯ ನಿವಾಸಿ ಸುಶೀಲ ಶರ್ಮಾ ಎಂಬ ಮಹಿಳೆಯ ಅಪಹರಣ ಪ್ರಕರಣ ಸಂಬಂಧ ಗೃಹ ಇಲಾಖೆ ಮತ್ತು ನಗರ ಪೊಲೀಸ್ ಆಯುಕ್ತರಿಗೆ ಹೈಕೊರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.
ತಮ್ಮ ಅತ್ತೆ ಸುಶೀಲ ಶರ್ಮಾ ಅವರನ್ನು ಆಕೆಯ ತಾಯಿ ಸುನಿತಾ ಶರ್ಮಾ ಅಪಹರಣ ಮಾಡಿದ್ದಾರೆ. ಹೀಗಾಗಿ, ಸುಶೀಲ ಶರ್ಮಾ ಅವರನ್ನು ಪತ್ತೆ ಹಚ್ಚಿ ಕೋರ್ಟ್ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ನಾಥೋರಾಮ್ ಶರ್ಮಾ ಎಂಬಾತ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಬುಧವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮತ್ತು ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರಿದ್ದ ವಿಭಾಗೀಯ ಪೀಠ, ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ನಗರ ಪೊಲೀಸ್ ಆಯುಕ್ತರು ಮತ್ತು ಅಮೃತಹಳ್ಳಿ ಠಾಣಾಧಿಕಾರಿಗೆ ನೋಟಿಸ್ ಜಾರಿ ಮಾಡಿದರು. ಹಾಗೆಯೇ, ಸುನಿತಾ ಶರ್ಮಾ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಿದೆ.
ಸುಶೀಲಾ ಶರ್ಮಾ ಅವರ ಆಸ್ತಿ ಕಬಳಿಸುವ ಉದ್ದೇಶದಿಂದ, ಆಕೆಯನ್ನು ತಾಯಿ ಸುನಿತಾ ಶರ್ಮಾರವರೇ 2018ರ ಫೆ.5ರಂದು ಅಪಹರಣ ಮಾಡಿದ್ದಾರೆ. ಸುಶೀಲಾ ಶರ್ಮಾ ದೂರವಾಣಿ ಕರೆ ಮಾಡಿದಾಗ ಸುನಿತಾ ಶರ್ಮಾರನ್ನು ಆಸ್ಪತ್ರೆಗೆ ದಾಖಲಿರಿಸಿರುವುದಾಗಿ ಹೇಳಿದರು. ಆದರೆ, ಆಸ್ಪತ್ರೆಯ ಹೆಸರು ಮಾತ್ರ ಹೇಳುತ್ತಿಲ್ಲ. ಹೀಗಾಗಿ, ಸುಶೀಲಾ ಶರ್ಮಾರ ಜೀವಕ್ಕೆ ಅಪಾಯವಿದೆ ಎಂಬ ಅನುಮಾನ ಮೂಡುತ್ತಿದೆ. ಈ ಕುರಿತು ಅಮೃತಹಳ್ಳಿ ಠಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಪೊಲೀಸರು ಸುಶೀಲಾ ಶರ್ಮಾರ ಪತ್ತೆ ಮಾಡಿಲ್ಲ. ಹೀಗಾಗಿ, ಸುಶೀಲಾ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದರು. ಅರ್ಜಿದಾರರ ಪರ ವಕೀಲ ಸಿ.ಎನ್.ರಾಜು ವಾದ ಮಂಡಿಸಿದರು.







