ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾದ ಮಕ್ಕಳು: ಮರಳಿ ತಾಯಿ ಮಡಲಿಗೆ

ಉಡುಪಿ, ಫೆ.14: ನಗರದ ಸರಕಾರಿ ಬಸ್ ನಿಲ್ಧಾಣದಲ್ಲಿ ಫೆ.13ರಂದು ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾದ ಇಬ್ಬರು ಮಕ್ಕಳನ್ನು ಮರಳಿ ತಾಯಿಯ ಮಡಿಲಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ.
ಕುಡುಕ ತಂದೆಯಿಂದಾಗಿ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕಂಡು ಬಂದ ಇಬ್ಬರು ಸಣ್ಣ ಮಕ್ಕಳನ್ನು ಸಾರ್ವಜನಿಕರ ಮಾಹಿತಿ ಮೇರೆಗೆ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ರಕ್ಷಿಸಿ, ನಿಟ್ಟೂರು ಸರಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ದಾಖಲು ಪಡಿಸಿದ್ದರು. ಅಲ್ಲದೆ ಬಿದ್ದು ಗಾಯಗೊಂಡ ಮಕ್ಕಳ ತಂದೆಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತಂದೆ ಅದೇ ದಿನ ಆಸ್ಪತ್ರೆ ಯಿಂದ ಪಲಾಯನ ಮಾಡಿದ್ದರು.
ಮನೆಯಿಂದ ಕಾಣೆಯಾದ ಮಕ್ಕಳ ಹುಡುಕಾಟದಲ್ಲಿದ್ದ ತಾಯಿ ಜಮಖಂಡಿ ಮೂಲದ ವಲಸೆ ಕಾರ್ಮಿಕರಾದ ಜ್ಯೋತಿ ಮಾಧ್ಯಮದ ಮೂಲಕ ಮಕ್ಕಳ ಬಗ್ಗೆ ತಿಳಿದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಚೇರಿಯನ್ನು ಸಂಪರ್ಕಿಸಿ ದರು. ಕುಡಿತದ ಅಮಲಿನಲ್ಲಿ ಗಂಡ ತನ್ನ ಮೇಲೆ ಹಲ್ಲೆ ನಡೆಸಿ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೊಗಿದ್ದನೆಂದು ಆಕೆ ಘಟನೆಯ ಬಗ್ಗೆ ಹೇಳಿ ಕೊಂಡಿದ್ದಾರೆ.
ಬಳಿಕ ನಿಟ್ಟೂರು ಸರಕಾರಿ ಬಾಲಕಿಯರ ಬಾಲ ಮಂದಿರದಲ್ಲಿದ್ದ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಮೋಹನ್ ಕುಮಾರ್, ಹೆತ್ತವರು ಒದಗಿ ಸಿದ ಮಕ್ಕಳ ಧೃಡಿಕರಣ ದಾಖಲೆ ಪತ್ರಗಳ ಪರಿಶೀಲಿಸಿ, ಕಾನೂನು ಪ್ರಕ್ರಿಯೆ ನಡೆಸಿ ಹೆತ್ತವರ ಮಡಿಲಿಗೆ ಒಪ್ಪಿಸಿದ್ದಾರೆ. ಮುಂದೆ ಈ ರೀತಿ ಮಾಡದಂತೆ ದಂಪತಿ ಮುಚ್ಚಳಿಕೆಯನ್ನು ಬರೆದು ಮಕ್ಕಳ ಕಲ್ಯಾಣ ಸಮಿತಿಗೆ ನೀಡಿದ್ದಾರೆ.







