ಶಿವಮೊಗ್ಗ: ಕಲುಷಿತ ನೀರು ಸೇವನೆ ಪ್ರಕರಣ; ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ
ಶಿವಮೊಗ್ಗ, ಫೆ. 14: ಜಿಲ್ಲೆಯ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಕಲುಷಿತ ಕುಡಿಯುವ ನೀರು ಸೇವಿಸಿ ತೀವ್ರ ಅಸ್ವಸ್ಥಗೊಂಡು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ದರೋರ್ವರು ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಅಸುನೀಗಿದ್ದಾರೆ. ಈ ಮೂಲಕ ಘಟನೆಗೆ ಸಂಬಂಧಿಸಿದಂತೆ ಮೃತಪಟ್ಟವರ ಸಂಖ್ಯೆ ನಾಲಕ್ಕೇರಿದಂತಾಗಿದೆ.
ಮೈದೊಳಲು ಗ್ರಾಮದ ನಿವಾಸಿ ಹುಸೇನ್ ಸಾಬ್ (75) ಮೃತಪಟ್ಟವರೆಂದು ಗುರುತಿಸಲಾಗಿದೆ. ಭಾನುವಾರು ತೀವ್ರ ಅಸ್ವಸ್ಥಗೊಂಡಿದ್ದ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗಿತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಲುಷಿತ ನೀರು ಸೇವನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಶಿವಪ್ಪ (75), ಅವರ ಪುತ್ರ ಹನುಮಂತ (35) ಹಾಗೂ ಪಂಚಾಕ್ಷರಿ (70) ಎಂಬವರು ಮೃತಪಟ್ಟಿದ್ದರು. ಒಟ್ಟಾರೆ 54 ಗ್ರಾಮಸ್ಥರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆಯ ನಂತರ ಗ್ರಾಮಕ್ಕೆ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದರು.
ಘಟನೆ ಹಿನ್ನೆಲೆ: ಮೈದೊಳಲು ಗ್ರಾಮದ ಅಲ್ಲಾ ದೇವರ ದೇವಾಲಯ ಹಿಂಭಾಗದ ಟ್ಯಾಂಕ್ ಮೂಲಕ ಕುಡಿಯುವ ನೀರು ಪೂರೈಕೆಯಾಗುತ್ತದೆ. ಆದರೆ ಕಳೆದ ನಾಲ್ಕೈದು ದಿನಗಳಿಂದ ಗ್ರಾಮಸ್ಥರಲ್ಲಿ ಏಕಾಏಕಿ ಬೇಧಿ, ವಾಂತಿಯ ಸಮಸ್ಯೆ ಕಾಣಿಸಿಕೊಂಡಿತ್ತು. ಕಲುಷಿತ ನೀರು ಸೇವನೆಯಿಂದ ಹಾಗೂ ಟ್ಯಾಂಕ್ ಅಸ್ವಚ್ಚತೆಯ ಕಾರಣದಿಂದ ಗ್ರಾಮದಲ್ಲಿ ಈ ಘಟನೆ ಸಂಭವಿಸಿತ್ತು.
'ಘಟನೆಯ ನಂತರ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರತಿಯೊಂದು ಮನೆಗೂ ಓ.ಆರ್.ಎಸ್ ಪ್ಯಾಕೇಟ್ ವಿತರಣೆ ಮಾಡುವುದರ ಜೊತೆಗೆ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜೊತೆಗೆ ದಿನದ 24 ಗಂಟೆಯ ಅವಧಿಯೂ ಕಾರ್ಯನಿರ್ವಹಣೆ ಮಾಡುವ ತಾತ್ಕಾಲಿಕ ಆಸ್ಪತ್ರೆ ತೆರೆಯಲಾಗಿದೆ. ಪ್ರಸ್ತುತ ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹನುಮಂತಪ್ಪರವರು ಬುಧವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.