ಮಂಗಳೂರು ವಿವಿ-ಆಸ್ಟ್ರೇಲಿಯಾದ ನ್ಯೂಕಾಸ್ಟಲ್ ವಿವಿ ನಡುವೆ ಶೈಕ್ಷಣಿಕ ಒಡಂಬಡಿಕೆ

ಕೊಣಾಜೆ, ಫೆ. 14: ವಿಶ್ವವಿದ್ಯಾನಿಲಯಗಳು ಸಂಶೋಧನೆಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಅಧ್ಯಯನಗಳಿಗೆ ಮಹತ್ವ ನೀಡಬೇಕಿದೆ ಎಂದು ಆಸ್ಟ್ರೇಲಿಯಾದ ನ್ಯೂ ಸೌಥ್ ವೇಲ್ಸ್‌ನ ನ್ಯೂಕಾಸ್ಟಲ್ ವಿಶ್ವವಿದ್ಯಾನಿಲಯದ ಹಿರಿಯ ಉಪಾಧ್ಯಕ್ಷರಾದ ಪ್ರೊ.ಕೆವಿನ್ ಹಾಲ್ ಅವರು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮಂಗಳೂರು ವಿವಿ ಹಾಗೂ ಆಸ್ಟ್ರೇಲಿಯಾದ ನ್ಯೂ ಕಾಸ್ಟಲ್ ವಿವಿ ನಡುವೆ ಐದು ವರ್ಷಗಳ ಶೈಕ್ಷಣಿಕ ಒಡಂಬಡಿಕೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಒಡಂಬಡಿಕೆಯಲ್ಲಿ ಮಂಗಳೂರು ವಿವಿ ಹಾಗೂ ಆಸ್ಟ್ರೇಲಿಯಾ ವಿವಿಯು ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಿದೆ ಮತ್ತು ಸಂಶೋಧನೆಗೆ ವೇದಿಕೆಯನ್ನು ಕಲ್ಪಿಸಿಕೊಡಲಿದೆ. ಇದರಲ್ಲಿ ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೆ ಪ್ರಾಧ್ಯಾಪಕ ಸಿಬ್ಬಂದಿಗಳಿಗೂ ಸಂಶೋಧನೆಗೆ ಅವಕಾಶಗಳ ಬಗ್ಗೆ ಒತ್ತು ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ನ್ಯೂ ಕಾಸ್ಟಲ್ ವಿವಿಯ ಗ್ಲೋಬಲ್ ಇನ್ನಾವೇಶನ್ ಸೆಂಟರ್‌ನ ನಿರ್ದೇಶಕರಾದ ಪ್ರೊ.ಅಜಯನ್ ವಿನು ಅವರು ಮಾತ ನಾಡಿ, ಈ ಎರಡು ವಿವಿಗಳ ನಡುವಿನ ನಡುವಿನ ಶೈಕ್ಷಣಿಕ ಒಡಂಬಡಿಕೆಯು ಉತ್ತಮವಾದ ಸಹಕಾರದೊಂದಿಗೆ ಹಾಗೂ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ನೂತನ ಆವಿಷ್ಕಾರದೊಂದಿಗೆ ಮುನ್ನಡೆಯಲು ಅನುಕೂಲವಾಗಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ. ಭೈರಪ್ಪ ಅವರು ವಹಿಸಿದ್ದರು. ಮಂಗಳೂರು ವಿವಿ ಕುಲಸಚಿವ ಪ್ರೊ.ನಾಗೇಂದ್ರ ಪ್ರಕಾಶ್ ಅವರು ಸ್ವಾಗತಿಸಿದರು. ಆಂಗ್ಲ ವಿಭಾಗದ ಪ್ರಾಧ್ಯಾಪಕ ಡಾ. ರವಿಶಂಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು.







