ಗರ್ಭಿಣಿಯ ಅತ್ಯಾಚಾರ, ಹತ್ಯೆ ಪ್ರಕರಣ: ಆರೋಪ ಸಾಬೀತು, ಫೆ. 20ರಂದು ಶಿಕ್ಷೆ ಪ್ರಕಟ

ಕುಂದಾಪುರ, ಫೆ.14: ಸುಮಾರು ಮೂರು ವರ್ಷಗಳ ಹಿಂದೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪಡುಗೋಪಾಡಿಯ ಗರ್ಭಿಣಿಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ಪ್ರಶಾಂತ ಮೊಗವೀರ ವಿರುದ್ಧದ ಆರೋಪಗಳು ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿವೆ.
ಆರೋಪಿಗೆ ಫೆ. 20ರಂದು ಶಿಕ್ಷೆ ಪ್ರಮಾಣ ಘೋಷಿಸುವುದಾಗಿ ನ್ಯಾಯಾಧೀಶ ಪ್ರಕಾಶ ಖಂಡೇರಿ ಪ್ರಕಟಿಸಿದ್ದಾರೆ.
ಪ್ರಕರಣದ ವಿವರ: ಕೋಟೇಶ್ವರ ಸಮೀಪದ ಗೋಪಾಡಿ ಗ್ರಾಮದ ಪಡುಗೋಪಾಡಿಯ ಸಮುದ್ರ ಕಿನಾರೆ ಸಮೀಪದ ಲಿಂಗಜ್ಜಿ ಮನೆ ನಿವಾಸಿಯಾಗಿದ್ದ 7 ತಿಂಗಳ ಗರ್ಭಿಣಿ ಇಂದಿರಾ ಎಂಬವರನ್ನು 2015ರ ಎಪ್ರಿಲ್ 11ರಂದು ಅತ್ಯಾಚಾರಗೈದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇಂದಿರಾ ಸಣ್ಣ ಮಗುವಿನೊಂದಿಗೆ ಮನೆಯಲ್ಲಿದ್ದ ಸಂದರ್ಭ ನೀರು ಕೇಳುವ ನೆಪದಲ್ಲಿ ಮನೆಯೊಳಗೆ ಪ್ರವೇಶಿಸಿದ ಆರೋಪಿ ಆಕೆಯನ್ನು ಅತ್ಯಾಚಾರ ಎಸಗಿ ತಲೆಯ ಮೇಲೆ ಕಲ್ಲನ್ನು ಎತ್ತಿಹಾಕಿ ಕೊಲೆಗೈದಿದ್ದ ಬಳಿಕ ಆಕೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ಪೊಲೀಸರು ಆರೋಪಿ ಪ್ರಶಾಂತ ಮೊಗವೀರನನ್ನು ಎ.12ರಂದು ಬಂಧಿಸಿದ್ದರು.
ಬರ್ಬರ ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಈ ವೇಳೆ ಪ್ರತಿಭಟನೆ ನಡೆಸಿದ್ದವು. ಪ್ರಕರಣದ ಗಂಭೀರತೆ ಹಾಗೂ ಮೃತ ಮಹಿಳೆಯ ಕುಟುಂಬಸ್ಥರ ಕೋರಿಕೆಯ ಮೇರೆಗೆ ಕುಂದಾಪುರದ ಹಿರಿಯ ವಕೀಲ ರವಿಕಿರಣ್ ಮುರ್ಡೇಶ್ವರರನ್ನು ವಿಶೇಷ ಸರಕಾರಿ ಅಭಿಯೋಜನಕರಾಗಿ ನೇಮಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಬುಧವಾರ ಆರೋಪಿ ಪ್ರಶಾಂತ ಮೊಗವೀರನನ್ನು ದೋಷಿ ಎಂದು ಪರಿಗಣಿಸಿದೆ. ಶಿಕ್ಷೆಯ ಪ್ರಮಾಣವನ್ನು ಫೆ.20ರಂದು ಘೋಷಿಸುವುದಾಗಿ ನ್ಯಾಯಾಧೀಶ ಪ್ರಕಾಶ ಖಂಡೇರಿ ಪ್ರಕಟಿಸಿದರು.







