ಬೆಂಗಳೂರು: ಅ.12 ರಿಂದ ಅಂತಾರಾಷ್ಟ್ರೀಯ ಪುಸ್ತಕ ಮೇಳ
ಬೆಂಗಳೂರು, ಫೆ.14: ಅಂತಾರಾಷ್ಟ್ರೀಯ ಪುಸ್ತಕ ಮೇಳವನ್ನು ಬೆಂಗಳೂರು ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರ ಸಂಘದ ವತಿಯಿಂದ ಅ.12ರಿಂದ 21ರವರೆಗೆ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಎನ್. ರಾಮಚಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಓದುಗರನ್ನು ಹೆಚ್ಚಿಸುವ ಉದ್ದೇಶದಿಂದ 4ವರ್ಷದ ಬಳಿಕ ನಗರದಲ್ಲಿ ಪುಸ್ತಕ ಮೇಳ ಆಯೋಜಿಸಲಾಗುತ್ತಿದೆ. ಮೇಳದಲ್ಲಿ ಸುಮಾರು 500ಮಳಿಗೆಗಳು ತಲೆಯೆತ್ತಲಿವೆ. ಇದರಲ್ಲಿ 100 ಕನ್ನಡ ಪುಸ್ತಕ ಮಳಿಗೆಗೆ ಅವಕಾಶ ಕಲ್ಪಿಸುವ ಯೋಜನೆಯಿದೆ ಎಂದರು. ಕನ್ನಡ ಪುಸ್ತಕ ಮಳಿಗೆಗೆ ರಿಯಾಯತಿ ಸಹ ಇರಲಿದ್ದು, ಎಲ್ಲಾ ಭಾಷೆಯ ಪುಸ್ತಕಗಳು ಮೇಳದಲ್ಲಿ ಕಾಣಸಿಗುತ್ತವೆ. ಒಂದೇ ಸ್ಥಳದಲ್ಲಿ ಎಲ್ಲಾ ಬಗೆಯ ಪುಸ್ತಕಗಳು ಲಭ್ಯವಾಗುವುದು ಪುಸ್ತಕ ಪ್ರೇಮಿಗಳ ಓದಿನ ದಾಹವನ್ನು ನೀಗಿಸಲು ಸಹಾಯಕವಾಗಲಿದೆ. ಲೇಖಕರಿಂದ ವಿಚಾರ ಸಂಕಿರಣ ಕೂಡ ಆಯೋಜಿಸಲಾಗುತ್ತದೆ ಎಂದು ಹೇಳಿದರು.
ಆಧುನಿಕ ಮಾಧ್ಯಮಗಳ ನಡುವೆಯೂ ಪುಸ್ತಕ ಓದುವವರ ಸಂಖ್ಯೆ ಕುಗ್ಗಿಲ್ಲ. ಹೀಗಾಗಿ, ಓದುಗರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಮೇಳ ಸಹಾಯಕವಾಗಲಿದೆ. ದೇಶ-ವಿದೇಶದಿಂದ ಪ್ರಕಾಶಕರು, ಲೇಖಕರು ಆಗಮಿಸುವುದರಿಂದ ಪುಸ್ತಕೋದ್ಯಮದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಯನ್ನು ಚರ್ಚಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಹರೀಂದ್ರ, ಕಾರ್ಯದರ್ಶಿ ವೆಂಕಟೇಶ್ ಬಾಬು, ಖಜಾಂಚಿ ಬಿ.ಮಂಜುನಾಥ್ ಉಪಸ್ಥಿತರಿದ್ದರು.





