ಮೊರಾರ್ಜಿ ದೇಸಾಯಿ, ಇನ್ನಿತರ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ಹೈಕೋರ್ಟ್ ಮಧ್ಯಂತರ ತಡೆ

ಬೆಂಗಳೂರು, ಫೆ.15: ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಇತರ ವಸತಿ ಶಾಲೆಗಳಿಗೆ 6ನೆ ತರಗತಿಯಿಂದ 10ನೆ ತರಗತಿಯವರೆಗೆ ಪ್ರವೇಶಾವಕಾಶ ಕಲ್ಪಿಸುವಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಿಲ್ಲ ಎಂದು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಫೆ.18ರ ರವಿವಾರ ನಡೆಸಲು ತೀರ್ಮಾನಿಸಿದ್ದ 6ನೆ ತರಗತಿಯ ಪ್ರವೇಶ ಪರೀಕ್ಷೆಗೆ ಹೈಕೋರ್ಟ್ ಗುರುವಾರ ಮಧ್ಯಂತ ತಡೆಯಾಜ್ಞೆ ನೀಡಿದೆ.
ವಿಶ್ವನಾಥ್ ಎಸ್. ಮಠದ ಸೇರಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಅಲ್ಲದೆ, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ, ಬೆಳಗಾವಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮತ್ತು ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರ ಪರ ವಾದಿಸಿದ ವಕೀಲ ಅಭಿಷೇಕ್‌ಕುಮಾರ್, ಮೋರಾರ್ಜಿ ದೇಸಾಯಿ ಸೇರಿ ಇತರ ವಸತಿ ಶಾಲೆಗಳಿಗೆ 6ನೆ ತರಗತಿಯಿಂದ 10 ನೇ ತರಗತಿಯವರೆಗೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಮೀಸಲಾತಿ, ಎಸ್ಸಿ-ಎಸ್ಟಿಗೆ ಶೇ.25ರಷ್ಟು, ಓಬಿಸಿ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಮೀಸಲಾತಿ ನೀಡಬೇಕು. ಆದರೆ, ಪ್ರಸ್ತುತ ಸಾಲಿನ ಮೊರಾರ್ಜಿ ದೇಸಾಯಿ ಶಾಲೆ ಸೇರಿ ಇತರ ವಸತಿ ಶಾಲೆಗಳ ಪ್ರವೇಶಕ್ಕೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಯಾವುದೆ ಮೀಸಲಾತಿಯನ್ನು ಕಲ್ಪಿಸದೆ, ಬರೀ ಎಸ್ಸಿ, ಎಸ್ಟಿ ಹಾಗೂ ಓಬಿಸಿ ವಿದ್ಯಾರ್ಥಿಗಳಿಗೆ ಶೇ.100ರಷ್ಟು ಮೀಸಲಾತಿಯನ್ನು ನೀಡಿದ್ದಾರೆ. ಹೀಗಾಗಿ, ಫೆ.18ರಂದು ನಡೆಯುವ 6ನೆ ತರಗತಿಯ ಪ್ರವೇಶ ಪರೀಕ್ಷೆಗೆ ತಡೆಯಾಜ್ಞೆ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಫೆ.18ರಂದು ನಡೆಸಲು ತೀರ್ಮಾನಿಸಿದ್ದ ಪ್ರವೇಶ ಪರೀಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡಿ, ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾಣೆಯನ್ನು ಫೆ.15ಕ್ಕೆ ಮುಂದೂಡಿದೆ.







