ದ.ಕ. ಜಿಲ್ಲೆಯನ್ನು ಬಲಾತ್ಕಾರದ ಬಂದ್‌ನಿಂದ ಮುಕ್ತಗೊಳಿಸಲು ಸಹಕರಿಸಿ: ಡಾ.ಯು.ಪಿ.ಶಿವಾನಂದ

ಮಂಗಳೂರು, ಫೆ. 16: ರಾಜ್ಯ ಹಾಗೂ ಜಿಲ್ಲೆಯಲ್ಲಿ ಬಲಾತ್ಕಾರದ ಬಂದ್ ವಿರೋಧಿಸಿ ಸುದ್ದಿ ಬಿಡುಗಡೆ ಪತ್ರಿಕೆ ಆರಂಭಿಸಿದ ಆಂದೋಲಕ್ಕೆ ಇದೀಗ ಕಾನೂನಿನಿಂದ ಬೆಂಬಲವೂ ದೊರಕಿದೆ. ಹಾಗಾಗಿ ಮುಂದೆ ಬಂದ್ ಕರೆಗಳನ್ನು ನೀಡುವ ಸಂದರ್ಭ ತಾಲೂಕು ಮಟ್ಟದಲ್ಲಿ ಅದನ್ನು ಎದುರಿಸಲು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಜನಜಾಗೃತಿ ಮೂಡಿಸುವ ಕೆಲಸವನ್ನು ಮುಂದುವರಿಸಲಾಗುವುದು ಎಂದು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 1997ರಲ್ಲಿ ಪುತ್ತೂರಿನ ಸೌಮ್ಯ ಭಟ್ ಕೊಲೆ ಪ್ರಕರಣದ ವೇಳೆ ಉಂಟಾದ ಗಲಭೆ, ಕರ್ಫ್ಯೂ ಸಂದರ್ಭದಲ್ಲಿ ಪತ್ರಿಕೆ ಶಾಂತಿ ಸೌಹಾರ್ದತೆ ಕಾಪಾಡಲು ಪ್ರಯತ್ನಿಸಿತ್ತು. ಇದರಂಗವಾಗಿ ಬಲರಾಮ ಆಚಾರ್ಯರ ನೇತೃತ್ವದಲ್ಲಿ ಸಾರ್ವಜನಿಕರ ಸಭೆಯನ್ನು ಕರೆದು ಬಲಾತ್ಕಾರದ ಬಂದ್ ಮತ್ತು ಕೋಮುಗಲಭೆ ವಿರುದ್ಧ ಸಭೆ ನಡೆದು ನಿರ್ಣಯ ಕೈಗೊಳ್ಳಲು ವೇದಿಕೆಯನ್ನು ರಚಿಸಲು ಸುದ್ದಿ ಪತ್ರಿಕೆ ಕಾರಣವಾಗಿತ್ತು. ಆ ಬಳಿಕ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಬಂದ್ ಮತ್ತು ಗಲಭೆಗಳು ಉಂಟಾಗುವ ಎಲ್ಲಾ ಸನ್ನಿವೇಶಗಳಲ್ಲಿ ಸುದ್ದಿ ಪತ್ರಿಕೆ ಜನಜಾಗೃತಿಗೆ ಪ್ರಯತ್ನಿಸಿ ಈವರೆಗೂ ಮುಂದುವರಿಸಿದೆ ಎಂದು ಅವರು ಹೇಳಿದರು.
2016ರಲ್ಲಿ ಮಂಗಳೂರು ಬೆಂಗಳೂರಿನಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿಯ ಮೂಲಕ ರಾಜ್ಯ ಹಾಗೂ ಜಿಲ್ಲಾ ಮಟ್ಟಗಳಲ್ಲಿ ಆಂದೋಲನಕ್ಕೆ ಬೆಂಬಲ ಕೋರಲಾ ಯಿತು. ಈ ನಡುವೆ, ಬಲಾತ್ಕಾರದ ಬಂದ್‌ನ ಸುದ್ದಿ ಆಂದೋಲನವನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ, ಅವಹೇಳ ಮಾಡಿ ಪತ್ರಿಕೆ ಹಾಗೂ ಸಿಬ್ಬಂದಿಗಳಿಗೂ ತೊಂದರೆಯುಂಟಾಗಿತ್ತು. ಅದಕ್ಕೆ ಪ್ರತಿಭಟನಾತ್ಮಕವಾಗಿ 2017ರ ಫೆಬ್ರವರಿಯಲ್ಲಿ ಸುದ್ದಿ ಪತ್ರಿಕೆ ಸ್ಥಗಿತಗೊಳಿಸಿ ಹೋರಾಟ ನಡೆಸಿದಾಗ ಜನ ಬೆಂಬಲದಿಂದ ಪತ್ರಿಕೆ ಪುನರಾರಂಭಗೊಳಿಸಲಾಗಿತ್ತು. ಇದರಿಂದ ಆಂದೋಲನವನ್ನು ಮುಂದುವರಿಸಲಾಗಿತ್ತು. ಇದೀಗ ಹೈಕೋರ್ಟ್ ಕೂಡಾ ಬಂದ್‌ನ ವಿರುದ್ಧ ನೀಡಿರುವ ತೀರ್ಪು ಆಂದೋಲನಕ್ಕೆ ಕಾನೂನು ಬೆಂಬಲ ದೊರಕಿಂತಾಗಿದೆ ಎಂದು ಅವರು ಹೇಳಿದರು. ಗೋಷ್ಠಿಯಲ್ಲಿ ಸಂತೋಷ್ ಕುಮಾರ್, ಉಮೇಶ್ ಮಿತ್ತಡ್ಕ, ಜ್ಯೋತಿ ಪ್ರಕಾಶ್ ಪುಣಚ, ಭಾಸ್ಕರ ರೈ ಮೊದಲಾದವು ಉಪಸ್ಥಿತರಿದ್ದರು.







