ಸಮಾಜ ಕಲ್ಯಾಣ ಇಲಾಖೆ: ಶೇ.25 ರಷ್ಟು ಸ್ಥಾನಗಳು ಹಿಂದುಳಿದ, ಅಲ್ಪಸಂಖ್ಯಾತರಿಗೆ ಮೀಸಲು; ಸಿಎಂ
ರಾಜ್ಯ ಬಜೆಟ್-2018

ಬೆಂಗಳೂರು, ಫೆ. 16: ವಿದ್ಯಾರ್ಥಿಗಳಲ್ಲಿ ಜಾತ್ಯತೀತ ಮತ್ತು ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವ ದೃಷ್ಟಿಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಶೇ.25ರಷ್ಟು ಸ್ಥಾನಗಳನ್ನು ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
* ಪ್ರಸ್ತುತ ಬೆಂಗಳೂರು ಸುತ್ತಮುತ್ತ ಕೃಷಿ ಭೂಮಿಯ ದರವು ಹೆಚ್ಚಾಗಿರುವುದರಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಭೂ ಖರೀದಿ ಯೋಜನೆಯಡಿ ಹಾಲಿ ಇರುವ ಘಟಕ ವೆಚ್ಚವನ್ನು 15 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು.
* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗುರುತಿಸಲ್ಪಟ್ಟ ಭೂರಹಿತ ದೇವದಾಸಿಯರ ಸಬಲೀಕರಣಕ್ಕಾಗಿ ಭೂ ಖರೀದಿ ಹಾಗೂ ಗಂಗಾ ಕಲ್ಯಾಣ ಯೋಜನೆಗಳಡಿ ಆದ್ಯತೆ ಮೇಲೆ ಸಾಲ ಮತ್ತು ಸಹಾಯಧನವನ್ನು ಒದಗಿಸಲಾಗುವುದು.
* ಪರಿಶಿಷ್ಟ ಜಾತಿ ಮತ್ತು ಪಂಗಡದ ಸಹಕಾರ ಸಂಘಗಳನ್ನು ಆರ್ಥಿಕವಾಗಿ ಸದೃಢವಾಗಿಸುವ ಸಲುವಾಗಿ ಷೇರು ಬಂಡವಾಳದ ರೂಪದಲ್ಲಿ ಸಹಾಯಧನವನ್ನು ನೀಡಲು ಉದ್ದೇಶಿಸಿದೆ. ರಾಜ್ಯದಲ್ಲಿರುವ ಅಂತಹ 100 ಅರ್ಹ ಸಂಘಗಳಿಗೆ, ಗರಿಷ್ಟ 10 ಲಕ್ಷ ರೂ.ಗಳ ಮಿತಿಗೆ ಒಳಪಟ್ಟು ಸಂಘಗಳಲ್ಲಿ ಸದಸ್ಯರಿಂದ ಪಾವತಿಯಾದ ಷೇರು ಬಂಡವಾಳ ಶೇ.50ರಷ್ಟು ನೀಡಲಾಗುವುದು.
* ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಂ, ಐಐಎಸ್‌ಸಿ, ಎನ್‌ಐಟಿ ಸೇರಿದಂತೆ ಮುಂತಾದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಒಂದು ಬಾರಿ ನೀಡುವ ಪ್ರೋತ್ಸಾಹಧನವನ್ನು 1 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.
* ಅಸ್ಪಶ್ಯತೆಯನ್ನು ಹೋಗಲಾಡಿಸುವ ಸಲುವಾಗಿ ಪರಿಶಿಷ್ಟ ಜಾತಿ ಹುಡುಗ ಬೇರೆ ಜಾತಿಯ ಹುಡುಗಿಯನ್ನು ಮದುವೆ ಮಾಡಿಕೊಂಡರೆ, ಹಾಲಿ ನೀಡುತ್ತಿರುವ ಪ್ರೋತ್ಸಾಹ ಮೊತ್ತ 2 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗಳಿಗೆ ಹಾಗೂ ಪರಿಶಿಷ್ಟ ಜಾತಿಯ ಹುಡುಗಿ ಬೇರೆ ಜಾತಿಯ ಹುಡುಗನನ್ನು ಮದುವೆ ಮಾಡಿಕೊಂಡರೆ, ಹಾಲಿ ನೀಡುತ್ತಿರುವ 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.
* ದೇವದಾಸಿಯರ ಮಕ್ಕಳ ಮದುವೆಗಾಗಿ ಹೆಣ್ಣು ಮಕ್ಕಳಿಗೆ 5 ಲಕ್ಷ ರೂ. ಹಾಗೂ ಗಂಡು ಮಕ್ಕಳಿಗೆ 3 ಲಕ್ಷ ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ.
* ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿನಿಲಯಗಳಲ್ಲಿ ಮತ್ತು ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವಂತಾಗಲು ಎಸೆಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಮತ್ತು ಅದಕ್ಕೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅತಿ ಹೆಚ್ಚು ಅಂಕ ಗಳಿಸಿರುವ 100 ಬಾಲಕರು ಮತ್ತು 100 ಬಾಲಕಿಯರಿಗೆ ಬೆಂಗಳೂರಿನಲ್ಲಿ ವಿಶೇಷ ಪರೀಕ್ಷಾ ಪೂರ್ವ ತರಬೇತಿಯನ್ನು ನೀಡಲಾಗುವುದು.
* ರಾಜ್ಯದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗುರುತಿಸಿದ 680 ಮ್ಯಾನ್ಯುಯಲ್ ಸ್ಕಾವೆಂಜರ್ಸ್ ಸಬಲೀಕರಣಕ್ಕಾಗಿ ಭೂ ಖರೀದಿ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ ಆದ್ಯತೆಯ ಮೇಲೆ ಸಾಲ ಮತ್ತು ಸಹಾಯಧನವನ್ನು ಒದಗಿಸಲಾಗುವುದು.
* ನಗರ ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡುತ್ತಿದ್ದು, ಇದೇ ರೀತಿಯಂತೆ ಬಿಬಿಎಂಪಿ, ಮಹಾನಗರಪಾಲಿಕೆ, ನಗರಸಭೆ, ಪುರಸಭೆಗಳಲ್ಲಿ ಪೌರ ಕಾರ್ಮಿಕರಿಗೆ ಸೇರಿದ ಒಬ್ಬ ವ್ಯಕ್ತಿಯನ್ನು ಸದಸ್ಯನಾಗಿ ನಾಮನಿರ್ದೇಶನ ಮಾಡಲಾಗುವುದು.
* ಅರಣ್ಯ ಅವಲಂಬಿತ ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಮಂಜೂರು ಮಾಡಿರುವ ಜಮೀನನ್ನು ಅಭಿವೃದ್ಧಿಪಡಿಸಲು ಕೃಷಿ ಯಂತ್ರೋಪಕರಣ, ನೀರಾವರಿ ಸೌಲಭ್ಯಗಳನ್ನು ಒದಗಿಸಲಾಗುವುದು.
* ಅರಣ್ಯ ಹಕ್ಕು ಕಾಯ್ದೆಯಡಿ ಮಂಜೂರಾದ ಜಮೀನುಗಳಲ್ಲಿ ಸೋಲಿಗ, ಜೇನುಕುರುಬ ಮತ್ತು ಅರಣ್ಯ ಮತ್ತು ಅರಣ್ಯದಂಚಿನ ಪ್ರದೇಶದ ಇತರೆ ಬುಡಕಟ್ಟು ಜನಾಂಗದವರಿಗೆ ಕಾಫಿ ಬೆಳೆಯಲು ಪ್ರೋತ್ಸಾಹಿಸಲಾಗುವುದು.
* ಮಹರ್ಷಿ ವಾಲ್ಮೀಕಿ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯನ್ನು ದೇವನಹಳ್ಳಿಯಲ್ಲಿ ಸ್ಥಾಪಿಸಲಾಗುವುದು.
* ಹಿರಿಯ ರಾಜಕೀಯ ಧುರೀಣರಾದ ಮಲ್ಲಿಕಾರ್ಜುನ ಸ್ವಾಮಿ, ಕೆ. ಪ್ರಭಾಕರ್ ಮತ್ತು ಕೆ.ಎಚ್.ರಂಗನಾಥ್ ಹೆಸರಿನಲ್ಲಿ ಸ್ಮಾರಕ ಭವನಗಳನ್ನು ತಲಾ ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು.
* ಪರಿಶಿಷ್ಟ ಜಾತಿ ಹಾಗೂ ಪಂಗಡದಲ್ಲಿ ಗುರುತಿಸಲ್ಪಟ್ಟ ದಕ್ಕಲಿಗ, ಸುಡುಗಾಡು ಸಿದ್ದ ಮುಂತಾದ ಅಲೆಮಾರಿ ಹಾಗೂ ಅರೆ ಅಲೆಮಾರಿ, ಚಿಕ್ಕ ಸಮುದಾಯಗಳ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗಾಗಿ ವಿಶೇಷ ಅನುದಾನ ಒದಗಿಸಲಾಗುವುದು.
* ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಕೆಟಿಪಿಪಿ ಕಾಯ್ದೆ ಅಡಿಯಲ್ಲಿ ಕಾಮಗಾರಿಗಳಿಗೆ ನಿಗದಿಪಡಿಸಿರುವ 50 ಲಕ್ಷ ರೂ.ಗಳವರೆಗಿನ ಮಿತಿಯನ್ನು ಒಂದು ಕೋಟಿ ರೂ.ವರೆಗೆ ಹೆಚ್ಚಿಸಲಾಗುವುದು.
* ಶ್ರೇಷ್ಟ ಗುರು ಮಾತಂಗ ಮಹರ್ಷಿಗಳ ಸ್ಮರಣಾರ್ಥವಾಗಿ ಹಂಪಿಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಸ್ಮಾರಕವನ್ನು ಸ್ಥಾಪಿಸಲಾಗುವುದು.
* ಡಾ. ಬಿ.ಆರ್.ಅಂಬೇಡ್ಕರ್ ಸ್ಫೂರ್ತಿ ಭವನ ಎಂಬ ಹೆಸರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಸ್ವಂತ ಕಟ್ಟಡವನ್ನು ವಿಕಾಸಸೌಧದ ಸಮೀಪದಲ್ಲಿ 25 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು.
* ರಾಜ್ಯ ಸರಕಾರದ ಸಂಸ್ಥೆಯಾದ ಕರ್ನಾಟಕ ಖಾದಿ ಮಂಡಳಿಯಿಂದ ಎಲ್ಲಾ ಬಿಪಿಎಲ್ ಕುಟುಂಬಗಳ ಮರುಪಾವತಿಗಾಗಿ ಬಾಕಿ ಇರುವ ಸಾಲವನ್ನು ಮನ್ನಾ ಮಾಡಲಾಗುವುದು.
* ಎಸ್ಸಿ, ಎಸ್ಟಿ ಜನರು ಉದ್ಯಮಶೀಲರಾಗಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಇಡಿಪಿ ತರಬೇತಿ ಹಾಗೂ ಮಾಹಿತಿ ಕೇಂದ್ರ ಸ್ಥಾಪಿಸಿ ತರಬೇತಿ ನೀಡಲಾಗುವುದು.
* 2012-13ನೇ ಸಾಲಿನಲ್ಲಿ ಆಶ್ರಮ ಶಾಲೆ, ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿಗಳಿಗೆ ಆಹಾರ ವೆಚ್ಚಕ್ಕಾಗಿ ಅನುಕ್ರಮವಾಗಿ 1300 ರೂ., 1500 ರೂ. ಮತ್ತು 1600 ರೂ.ಗಳಿಗೆ ಹೆಚ್ಚಿಸಲಾಗುವುದು.
* ಸೋಲಿಗ, ಜೇನು ಕುರುಬ, ಕಾಡು ಕುರುಬ, ಇರುಳಿಗ, ಕೋರಗ, ಎರವ, ಹಸಲರು, ಹಕ್ಕಿಪಿಕ್ಕಿ, ಸಿದ್ಧಿ ಇತ್ಯಾದಿ ಆದಿವಾಸಿ ಸಮುದಾಯಗಳ ಸಮಗ್ರ ಅಭಿವದ್ಧಿಗಾಗಿ 300 ಕೋಟಿ ರೂ.ಗಳನ್ನು ಒದಗಿಸಲಾಗುವುದು.
* ಆದಿವಾಸಿ ಸಮುದಾಯ ಭವನವನ್ನು ಹುಣಸೂರು ಹಾಗೂ ಎಚ್.ಡಿ.ಕೋಟೆ ಯಲ್ಲಿ 1 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು.
* ಬಂಜಾರ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದಿಂದಲೇ ಗಂಗಾಕಲ್ಯಾಣ ಮತ್ತು ಸ್ವಯಂ ಉದ್ಯೋಗ ಮುಂತಾದ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುವುದು.
* 2018-19ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ 6,528 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು.







