ವೈದ್ಯಕೀಯ ಶಿಕ್ಷಣ: ಶುಶ್ರೂಷಾ ಶಾಲೆಗಳು ಮೇಲ್ದರ್ಜೆಗೆ; ಮುಖ್ಯಮಂತ್ರಿ
ರಾಜ್ಯ ಬಜೆಟ್-2018

ಬೆಂಗಳೂರು, ಫೆ.16: ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುವ ಶುಶ್ರೂಷಾ ಶಾಲೆಗಳು ಹಾಗೂ ಕಾಲೇಜುಗಳಲ್ಲಿನ ಸೌಲಭ್ಯಗಳನ್ನು 30 ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
* ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ 1000 ಹಾಸಿಗೆ ಸಾಮರ್ಥ್ಯದ ಹೆಚ್ಚುವರಿ ವಾರ್ಡ್‌ಗಳನ್ನು ನಿರ್ಮಿಸಲಾಗುವುದು.
* ಗದಗ, ಕೊಪ್ಪಳ ಮತ್ತು ಚಾಮರಾಜನಗರದ ವೈದ್ಯಕೀಯ ಕಾಲೇಜುಗಳಲ್ಲಿ ತಲಾ 100 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಆಸ್ಪತ್ರೆಗಳ ಕಟ್ಟಡ ನಿರ್ಮಾಣವನ್ನು ಪ್ರಾರಂಭಿಸಲಾಗುವುದು. ಇದಕ್ಕಾಗಿ 90 ಕೋಟಿ ರೂ.ಳ ಅನುದಾನವನ್ನು ಒದಗಿಸಲಾಗಿದೆ.
* 2018-19ನೆ ಸಾಲಿನಲ್ಲಿ ಶಿವಮೊಗ್ಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 7.81 ಕೋಟಿ ರೂ.ಗಳ ವೆಚ್ಚದಲ್ಲಿ ಹೃದ್ರೋಗ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುವುದು.
* 2018-19ನೆ ಸಾಲಿನಲ್ಲಿ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ 15 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಒಂದು ಪೆಟ್ ಸಿ.ಟಿ ಸ್ಕಾನ್ ಸೌಲಭ್ಯವನ್ನು ಕಲ್ಪಿಸಲಾಗುವುದು.
* ಮೈಸೂರಿನಲ್ಲಿರುವ ಶುಶ್ರೂಷಾ ಕಾಲೇಜಿಗೆ 30 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲಾಗುವುದು.
* ಬೀದರ್ ಹಾಗೂ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಗದಗ ಇಲ್ಲಿ ತಲಾ 15 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕ್ಯಾಥ್‌ಲ್ಯಾಬ್ ಸೌಲಭ್ಯದೊಂದಿಗೆ ಹೃದ್ರೋಗ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲಾಗುವುದು.
* ಗುಲ್ಬರ್ಗಾದ ವೈದ್ಯಕೀಯ ಕಾಲೇಜಿನಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸುಟ್ಟ ಗಾಯಗಳ ವಾರ್ಡ್ ಅನ್ನು ಪ್ರಾರಂಭಿಸಲಾಗುವುದು.
* ಹಾಸನ, ಮೈಸೂರು ಮತ್ತು ಕಾರವಾರ ವೈದ್ಯಕೀಯ ಕಾಲೇಜುಗಳಲ್ಲಿ ತಲಾ 15 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲಾಗುವುದು.
* 2018-19ನೆ ಸಾಲಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಗೆ ಒಟ್ಟಾರೆಯಾಗಿ 2,177 ಕೋಟಿ ರೂ.ಗಳನ್ನು ಒದಗಿಸಲಾಗಿದೆ.







