ಬೆಂಗಳೂರು ನಗರಕ್ಕೆ ‘ಮೆಟ್ರೋ’ ಮೂರನೆ ಹಂತ: ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯ ಬಜೆಟ್-2018

ಬೆಂಗಳೂರು, ಫೆ. 16: ಮುಂದಿನ ಐದು ವರ್ಷಗಳಲ್ಲಿ ನಗರದ ಎಲ್ಲ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲು ಉದ್ದೇಶಿಸಿದ್ದು, 2018-19ನೆ ಸಾಲಿನಲ್ಲಿ 150 ಕಿ.ಮೀ ಉದ್ದದ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಕೆರೆಗಳ ಅಭಿವೃದ್ಧಿ: ಪಾಲಿಕೆ ವತಿಯಿಂದ ಒಟ್ಟು 88 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಪ್ರಾರಂಭಿಕವಾಗಿ 40 ಕೆರೆಗಳ ಅಭಿವೃದ್ಧಿಗೆ ಕ್ರಮ. ಪಾಲಿಕೆ ವ್ಯಾಪ್ತಿಯ 100 ಕಿ.ಮೀ ಉದ್ದದ ಪ್ರಮುಖ ರಸ್ತೆಗಳ ಸಮಗ್ರ ಅಭಿವೃದ್ಧಿ. ನಗರದ ವಾಹನ ದಟ್ಟಣೆ ಕಡಿಮೆಗೊಳಿಸಲು ಪ್ರಮುಖ ಎಂಟು ಜಂಕ್ಷನ್‌ಗಳಲ್ಲಿ ಗ್ರೇಡ್ ಸೆಪರೇಟರ್ ನಿರ್ಮಾಣ.
150 ಕಿ.ಮೀ ಬೃಹತ್ ನೀರುಗಾಲುವೆ ಅಭಿವೃದ್ಧಿ. ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ 250 ಕಿ.ಮೀ. ಉದ್ದದ ವಿವಿಧ ರಸ್ತೆಗಳ ಪಾದಚಾರಿ ಮಾರ್ಗಗಳ ಅಭಿವೃದ್ಧಿ. ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿರುವ 110 ಹಳ್ಳಿಗಳ ರಸ್ತೆಗಳ ಅಭಿವೃದ್ಧಿ. ವೈಟ್‌ಫೀಲ್ಡ್ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಯಿಂದ ಆಗುತ್ತಿರುವ ತೀವ್ರ ವಾಹನದಟ್ಟಣೆ ಸಮಸ್ಯೆಯನ್ನು ನಿವಾರಿಸಲು ಐಟಿಪಿಎಲ್‌ಗೆ ಪರ್ಯಾಯ ಸಂಪರ್ಕ ಕಲ್ಪಿಸುವ 14 ರಸ್ತೆಗಳ ಅಭಿವೃದ್ಧಿ.
ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಿಗ್ನಲ್ ಮುಕ್ತ ಕಾರಿಡಾರ್ ಕಾಮಗಾರಿಗೆ ಸಂಬಂಧಿಸಿದಂತೆ ಒಡಂಬಡಿಕೆಯ ಪ್ರಕಾರ ಎಚ್‌ಎಎಲ್ ಸಂಸ್ಥೆಯವರು ನೀಡಿರುವ ಸ್ವತ್ತಿಗೆ ಬದಲಾಗಿ, ಎನ್‌ಎಎಲ್-ವಿಂಡ್ ಟನಲ್ ರಸ್ತೆ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.
ಇತ್ತೀಚೆಗೆ ಬೆಂಗಳೂರು ನಗರವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಪರಿಗಣಿಸಿರುವ ಹಿನ್ನೆಲೆಯಲ್ಲಿ ಯೋಜನೆಗಳ ಅನುಷ್ಠಾನಕ್ಕಾಗಿ ವಿಶೇಷ ಉದ್ದೇಶ ವಾಹಕವನ್ನು ರಚಿಸಲಾಗಿದ್ದು, ಕೇಂದ್ರ ಸರಕಾರದ 500 ಕೋಟಿ ರೂ.ಗಳ ಅನುದಾನದೊಂದಿಗೆ ರಾಜ್ಯದ 500 ಕೋಟಿ ರೂ.ಗಳ ಪಾಲನ್ನು ಸೇರಿಸಿ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಲಾಗಿದೆ.
ಈ ಯೋಜನೆಯಡಿಯಲ್ಲಿ ಪ್ರದೇಶಾಧಾರಿತ ಅಭಿವೃದ್ಧಿ ಮಾದರಿಯಲ್ಲಿ ನಗರದ 25 ಪ್ರಮುಖ ರಸ್ತೆಗಳನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿ, ಐತಿಹಾಸಿಕ ವಾಣಿಜ್ಯ ಕೇಂದ್ರವಾದ ಕೆ.ಆರ್. ಮಾರುಕಟ್ಟೆ ಪ್ರದೇಶದ ಪುನಶ್ಚೇತನ, ಶಿವಾಜಿನಗರದ ಸಂಯೋಜಿತ ಸಂಚಾರಿ ಕೇಂದ್ರ, ಕಬ್ಬನ್ ಉದ್ಯಾನ ಅಭಿವೃದ್ಧಿ, ಸ್ವತಂತ್ರಪಾಳ್ಯ ಪ್ರದೇಶದ ಅಭಿವೃದ್ಧಿ, ಹಲಸೂರು ಕೆರೆ ಮತ್ತು ಸ್ಯಾಂಕಿ ಕೆರೆಗಳ ಅಭಿವೃದ್ಧಿ, ಕೆ.ಸಿ.ಜನರಲ್ ಆಸ್ಪತ್ರೆಯ ನವೀಕರಣ ಕೈಗೆತ್ತಿಕೊಳ್ಳಲಾಗುವುದು.
ಗಾಂಧಿ ಬಝಾರ್, ಗಾಂಧಿ ನಗರದ ಸುಖಸಾಗರ್ ಹೊಟೇಲ್ ಬಳಿ, ಡಿಸ್ಪೆನ್ಸರಿ ರಸ್ತೆ ಬಳಿ, ರೇಸ್ ಕೋರ್ಸ್ ಬಳಿ, ಶೇಷಾದ್ರಿ ರಸ್ತೆ, ಕೋರಮಂಗಲ 4ನೆ ಬಡಾವಣೆ ಬಳಿ, ಜಯನಗರ ಕಾಂಪ್ಲೆಕ್ಸ್ ಬಳಿ ಹಾಗೂ ಪಾಲಿಕೆಯ ಕೇಂದ್ರ ಕಚೇರಿಯ ಆವರಣದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ವಾಹನ ನಿಲ್ದಾಣವನ್ನು ನಿರ್ಮಿಸಲಾಗುವುದು.
ಬಿಬಿಎಂಪಿ ಸೇರಿ ರಾಜ್ಯದ ಎಲ್ಲ್ಲ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯ ನಾಗರಿಕರಿಗೆ ಆಸ್ತಿ ತೆರಿಗೆ ವಹಿ ನಕಲು (ಖಾತಾ), ಕಟ್ಟಡ ನಕ್ಷೆ ಅನುಮೋದನೆ, ನೀರು ಮತ್ತು ವಿದ್ಯುತ್ ಸಂಪರ್ಕ, ರಸ್ತೆ ತುಂಡರಿಸಲು ಅನುಮತಿ ಇತ್ಯಾದಿ ನಾಗರಿಕ ಸೇವೆಗಳನ್ನು ಸುಲಭವಾಗಿ ಒದಗಿಸಲು ಸ್ವಯಂ ಚಾಲಿತ ಆನ್‌ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ, ಇದರ ಬಳಕೆಯನ್ನು ಕಡ್ಡಾಯಗೊಳಿಸಲಾಗುವುದು.
ಮೆಟ್ರೋ ರೈಲು ಯೋಜನೆ ಹಂತ-2ರಲ್ಲಿ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ವರೆಗೆ, ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ, ನಾಗಸಂದ್ರದಿಂದ ಬಿಐಇಸಿ ವರೆಗೆ, ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್‌ಷಿಪ್‌ವರೆಗೆ, ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗೆ ಮತ್ತು ಗೊಟ್ಟಿಗೆರೆಯಿಂದ ನಾಗವಾರದವರೆಗೆ ಒಟ್ಟು 72.095 ಕಿ.ಮೀ ಉದ್ದದ ಕಾಮಗಾರಿಯನ್ನು 26,405.14 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು ಮಾರ್ಚ್ 2021ರ ಅಂತ್ಯದೊಳಗೆ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು.
ಹಂತ-2‘ಎ’: ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್. ಪುರಂ ವರೆಗಿನ 17 ಕಿಲೋಮೀಟರ್ ಹೊರವರ್ತುಲ ಮಾರ್ಗದಲ್ಲಿ 4,202 ಕೋಟಿ ರೂ. ಅಂದಾಜಿನ ಹೊಸ ಮೆಟ್ರೋ ಮಾರ್ಗಕ್ಕೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಹಂತ-2‘ಬಿ’: 5,950 ಕೋಟಿ ರೂ.ಅಂದಾಜು ವೆಚ್ಚದ 29.06 ಕಿಲೋ ಮೀಟರ್ ಉದ್ದದ ನಾಗವಾರ ಮೆಟ್ರೋ ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಘೋಷಣೆ ಮಾಡಿದರು.
‘2018-19ರಲ್ಲಿ 105.55 ಕಿ.ಮೀ ಉದ್ದದ ಬೆಂಗಳೂರು ಮೆಟ್ರೋ ಹಂತ-3 ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಸಲು ಅಗತ್ಯ ಕ್ರಮ. ಹಂತ-3ರಲ್ಲಿ ಜೆಪಿ ನಗರದಿಂದ ಹೆಬ್ಬಾಳದ ಮೂಲಕ ಕೆಆರ್ ಪುರಂ, ಟೋಲ್‌ಗೇಟ್‌ನಿಂದ ಕಡಬಗೆರೆ, ಗೊಟ್ಟಿಗೆರೆಯಿಂದ ಬಸವಾಪುರ, ಆರ್‌ಕೆ ಹೆಗ್ಡೆ ನಗರದಿಂದ ಏರೋಸ್ಪೇಸ್ ಪಾರ್ಕ್, ಕೋಗಿಲು ಕ್ರಾಸ್‌ನಿಂದ ರಾಜಾನುಕುಂಟೆ, ಬೊಮ್ಮಸಂದ್ರದಿಂದ ಅತ್ತಿಬೆಲೆ ಮತ್ತು ಇಬಲೂರಿನಿಂದ ಕರ್ಮಲ್‌ರಾಮ್ ಮಾರ್ಗಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ. ಇದರಿಂದ ಎಲ್ಲ್ಲ ಹಂತದ ಮಾರ್ಗಗಳೂ ಸೇರಿ ಒಟ್ಟಾರೆ ಮೆಟ್ರೋ ಮಾರ್ಗದ ಉದ್ದ 266 ಕಿಲೋ ಮೀಟರ್‌ಗಳಾಗಲಿದೆ.







