ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ತಡೆದು ದರೋಡೆಗೆ ಸಂಚು: ಮೂವರ ಬಂಧನ
ಪಣಂಬೂರು ಕುದುರೆಮುಖ ಜಂಕ್ಷನ್ ಬಳಿ ಸಂಚು

ಮಂಗಳೂರು, ಫೆ. 16: ಪಣಂಬೂರು ಕುದುರೆಮುಖ ಜಂಕ್ಷನ್ ಬಳಿ ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ತಡೆದು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ, ಹಣ ಹಾಗೂ ಚಿನ್ನಾಭರಣ ದರೋಡೆಗೆ ಸಂಚು ರೂಪಿಸುತ್ತಿದ್ದ ತಂಡದ ಮೇಲೆ ಶುಕ್ರವಾರ ದಾಳಿ ಮಾಡಿರುವ ಪಣಂಬೂರು ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಉಡುಪಿ ಅಂಬಲಪಾಡಿಯ ಪ್ರದೀಪ್ ಕುಮಾರ್ ಯಾನೆ ಪ್ರದೀಪ್ ಮೆಂಡನ್ (47), ಕುದ್ರೋಳಿ ಬೆಂಗ್ರೆಯ ಸುನೀಲ್ (20), ಬೋಳಾರದ ಚರಣ್ (32) ಬಂಧಿತ ಆರೋಪಿಗಳು.
ಭರತ್ ಮತ್ತು ನವೀನ್ ಎಂಬವರ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ತಲವಾರು, ಮೆಣಸಿನ ಹುಡಿ, ರೋಪ್ ವಶಪಡಿಸಿಕೊಂಡಿದ್ದಾರೆ. ತಣ್ಣೀರುಬಾವಿಯಲ್ಲಿ ಇತ್ತೀಚೆಗೆ ನಡೆದ ಭರತೇಶ್‌ನ ಅಣ್ಣ ಶಿವರಾಜ್‌ನನ್ನು ಅನೀಶ್ ಹಾಗೂ ಸಹಚರರು ಕೊಲೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಅನೀಶ್ ಕಡೆಯವರನ್ನು ಕೊಲೆ ಮಾಡಿದ ಬಳಿಕ ಹೊರ ರಾಜ್ಯಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದು, ಅದಕ್ಕಾಗಿ ಹಣದ ಅವಶ್ಯಕತೆ ಇದ್ದುದರಿಂದ ಹೆದ್ದಾರಿ ದರೋಡೆ ನಡೆಸಲು ನಿಂತಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಬೆಳಗ್ಗಿನ ಜಾವ 3.30ಕ್ಕೆ ಲಭಿಸಿದ ಖಚಿತ ಮಾಹಿತಿ ಮೇರೆಗೆ 4.10ಕ್ಕೆ ಪಿಎಸ್‌ಐ ಉಮೇಶ್ ಕುಮಾರ್, ಪಣಂಬೂರು ಠಾಣೆ ಸಿಬ್ಬಂದಿ ಹಾಗೂ ಮಂಗಳೂರು ಉತ್ತರ ವಿಭಾಗ ರೌಡಿ ನಿಗ್ರಹ ದಳದ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದಾಗ ಐವರು ಆರೋಪಿಗಳು ದ್ವಿಚಕ್ರ ವಾಹನದೊಂದಿಗೆ ದುಷ್ಕೃತ್ಯ ನಡೆಸಲು ನಿಂತಿರುವುದು ಗಮನಕ್ಕೆ ಬಂದಿದೆ. ಪೊಲೀಸರನ್ನು ಕಂಡಾಗ ಆರೋಪಿಗಳು ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ಸಂದರ್ಭ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.







