‘ಪ್ರಕೃತಿಯಿಂದಲೇ ನೇರ ಪರಿಸರ ಜ್ಞಾನ ಸಂಪಾದಿಸಿ’
ಕಡಲತೀರ ಅಧ್ಯಯನ ಜಾಥಾಕ್ಕೆ ಪೂರ್ವಭಾವಿ ಸಭೆ

ಉಡುಪಿ, ಫೆ. 16: ಪಠ್ಯ, ಪುಸ್ತಕಗಳಲ್ಲಿ ಅಚ್ಚಾದ ಪಾಠವನ್ನು ಕಲಿಯುವುದಕ್ಕಿಂತ ಪ್ರಕೃತಿಯಿಂದಲೇ ನೇರವಾಗಿ ಪರಿಸರಕ್ಕೆ ಸಂಬಂಧಿಸಿ ಜ್ಞಾನ, ತಿಳುವಳಿಕೆ ಮತ್ತು ಕಾಳಜಿಯನ್ನು ಪಡೆಯುವುದರಿಂದ ಪರಿಸರದ ಕುರಿತಂತೆ ನೈಜ ಪ್ರೀತಿ ಮೂಡಲು ಸಾಧ್ಯವಿದೆ. ಶಾಲಾ ಹಂತದಿಂದಲೇ ಈ ಕಾರ್ಯ ನಡೆಯಬೇಕಿದೆ ಎಂದು ಪರಿಸರ, ನಿಸರ್ಗ ಸಂರಕ್ಷಣಾ ಸಂಸ್ಥೆಯ ಕಾರ್ಯದರ್ಶಿ ಈಶ್ವರ್ ಪ್ರಸಾದ್ ಹೇಳಿದ್ದಾರೆ.
ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದಲ್ಲಿ ಅಜ್ಜರಕಾಡು ಡಾ. ಜಿ. ಶಂಕರ್ ಸರಕಾರಿ ಮಹಿಳಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಪರಿಸರ ಮನನ ಹಾಗೂ ಉಡುಪಿ ಕಡಲತೀರ ಅಧ್ಯಯನ ಜಾಥ- 2018ರ ಕುರಿತು ಪುರಭವನದಲ್ಲಿ ಶುಕ್ರವಾರ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಶ್ವದ ಅನೇಕ ದೇಶಗಳಲ್ಲಿ ಪರಿಸರದ ಕುರಿತು ವಿವಿಧ ಕಾರ್ಯಕ್ರಮಗಳು ಸಾರ್ವಜನಿಕವಾಗಿ ನಡೆಯುತ್ತವೆ. ಆದರೆ ನಮ್ಮಲ್ಲಿ ಪರಿಸರದ ಕುರಿತಂತೆ ನಿರೀಕ್ಷಿತ ಪ್ರಮಾಣದಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿಲ್ಲ. ಜನರಿಗೆ ಮಾಹಿತಿ ಸಿಕ್ಕಿದರೆ ಎಲ್ಲಿ ಪ್ರತಿಭಟಿಸುತ್ತಾರೋ ಎಂಬ ದುರಾಲೋಚನೆಯಿಂದ ಜಾಗೃತಿ ಕಾರ್ಯದಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಹೀಗಾಗಿ ನಮ್ಮ ದೇಶದಲ್ಲಿ ಪರಿಸರ ನಾಶ ರಾಜಾರೋಷವಾಗಿ ನಡೆಯುತ್ತಿದೆ. ಪರಿಸರದ ಕುರಿತು ವಿಶ್ವಸಂಸ್ಥೆ ನೀಡುತ್ತಿ ರುವ ಎಚ್ಚರಿಕೆ, ಮಾಹಿತಿಗಳನ್ನು ಜನರಿಗೆ ವಿವರಿಸುವ ಕೆಲಸ ನಡೆಯುತ್ತಲೇ ಇಲ್ಲ ಎಂದರು.
ಸಮುದ್ರದಿಂದ ಆಹಾರ: ಹೀಗಾಗಿ ನಮ್ಮನ್ನು ನಾವು ತಿದ್ದಿಕೊಂಡು ಬದಲಾಗದೇ ಇದ್ದರೆ ನಮ್ಮ ನಾಶ ನಮ್ಮಿಂದಲೇ ಆಗಲಿದೆ. ಜಗತ್ತಿನ ಶೇ. 40ರಷ್ಟು ಆಹಾರ ಸಮುದ್ರದಿಂದಲೇ ಮನುಷ್ಯನಿಗೆ ಲಭಿಸುತ್ತಿದೆ. ಔಷಧಿಗಳಿಗೆ ಬೇಕಾದ ಉತ್ಪನ್ನಗಳು ಸಹ ಅಗಾಧ ಪ್ರಮಾಣದಲ್ಲಿ ಸಿಗುತ್ತಿವೆ. ಆದರೆ ಇಂದು ಅದೇ ಸಮುದ್ರ ಮನುಷ್ಯದ ದುರಾಸೆಯಿಂದಾಗಿ ರಾಸಾಯನಿಕಯುಕ್ತವಾಗಿ ಪರಿವರ್ತನೆಯಾಗಿ ಕಲುಷಿತಗೊಳ್ಳುತ್ತಿದೆ ಎಂದರು.
ಸಮುದ್ರದ ಪರಿಭಾಷೆಯನ್ನು ಅರ್ಥೈಸಿಕೊಳ್ಳದೇ ನಾವು ಔಷಧ, ರಾಸಾಯನಿಕ ಗೊಬ್ಬರ, ನ್ಯೂಕ್ಲಿಯರ್ ವೇಸ್ಟ್‌ಗಳನ್ನು ಸಮುದ್ರಕ್ಕೆ ಬೇಕಾಬಿಟ್ಟಿ ಸುರಿಯುತ್ತಿದ್ದೇವೆ. ನಮ್ಮ ಪಾಲಿಗೆ ಸಮುದ್ರ ಒಂದು ಡಂಪಿಂಗ್ ಯಾರ್ಡ್‌ನಂತೆ ಆಗಿಬಿಟ್ಟಿದೆ. ಇದು ಪ್ರಕೃತಿ ನಾಶದ ಪ್ರಮುಖ ಅಂಶವಾಗಿದೆ ಎಂದು ಈಶ್ವರ್ ಪ್ರಸಾದ್ ಹೇಳಿದರು.
ಈ ಸಂದರ್ಭದಲ್ಲಿ ಉಡುಪಿಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಡಾ. ಲಕ್ಷ್ಮೀಕಾಂತ್, ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರೊ. ಪ್ರಕಾಶ್ ಕ್ರಮಧಾರಿ ಸ್ವಾಗತಿಸಿ, ಕಾರ್ಯ ಕ್ರಮ ನಿರೂಪಿಸಿದರು.
ಪರಿಸರಕ್ಕೆ ಸಂಬಂಧಿಸಿದಂತೆ 41 ನಿಮಿಷಗಳ ವಿಶ್ವದ ಪ್ರಮುಖ ಸಾಕ್ಷ ಚಿತ್ರ ವೊಂದನ್ನು ವಿದ್ಯಾರ್ಥಿಗಳಿಗೆ ಇದೇ ವೇಳೆ ಪ್ರದರ್ಶಿಸಿ ಪರಿಸರ ನಾಶದ ಪರಿಣಾಮಗಳ ಕುರಿತು ತಿಳಿ ಹೇಳಲಾಯಿತು.







