ಕಾಸರಗೋಡು : ವಿದ್ಯುತ್ ಬಳಕೆಗೆ ನೂತನ ಆವಿಷ್ಕಾರ
► ಮನೆಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ► ಇಂತಹ ವ್ಯವಸ್ಥೆ ದೇಶದಲ್ಲೇ ಪ್ರಥಮ

ಕಾಸರಗೋಡು, ಫೆ. 16: ವಿದ್ಯುತ್ ಬಳಕೆಗೆ ನೂತನ ಆವಿಷ್ಕಾರದೊಂದಿಗೆ ವಿದ್ಯುತ್ ಮಂಡಲಿ ಮುಂದೆ ಬಂದಿದೆ. ಇನ್ನು ಮುಂದೆ ಮನೆಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕೆ.ಎಸ್.ಇ.ಬಿ. ತೀರ್ಮಾನಿಸಿದ್ದು, ಮೊಬೈಲ್ ಫೋನ್ ಬಳಕೆಯ ರೀತಿಯಲ್ಲಿ ರಿಚಾರ್ಜ್ ಕಾರ್ಡ್ ಸೌಲಭ್ಯ ಒಳಗೊಂಡಿದೆ.
ದೇಶದಲ್ಲೇ ಪ್ರಥಮ ಬಾರಿಗೆ ಇಂತಹ ವ್ಯವಸ್ಥೆ ಕೇರಳದಲ್ಲಿ ಜಾರಿಗೆ ಬರುತ್ತಿದ್ದು, ರಿಚಾರ್ಜ್ ಮೊತ್ತ ಮುಗಿದ ವೇಳೆ ವಿದ್ಯುತ್ ಕಡಿತಗೊಳ್ಳಲಿದೆ. ಬಳಿಕ ರಿಚಾರ್ಜ್ ಮಾಡಿ ಕಾರ್ಡ್ ಮೀಟರ್ ಗೆ ಅಳವಡಿಸಿದ್ದಲ್ಲಿ ಮಾತ್ರ ವಿದ್ಯುತ್ ಸಂಪರ್ಕ ಮರು ಕಲ್ಪಿಸಲಿದೆ.
ವಿದ್ಯುನ್ಮ೦ಡಲಿ ಮೂಲಕ ರಿಚಾರ್ಜ್ ಕೂಪನ್ ಗಳನ್ನು ವಿತರಿಸಲಾಗುವುದು. ಇದರಿಂದ ಶುಲ್ಕ ಮರುಪಾವತಿ ವಿಳಂಬ, ಬಿಲ್ ಪಾವತಿಸದೇ ವಂಚನೆ, ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತ ಮೊದಲಾದ ಸಮಸ್ಯೆಗಳಿಂದ ಮುಕ್ತವಾಗಲಿದೆ.
ಈಗಾಗಲೇ ಕೋಟ್ಯಾ೦ತರ ರೂ. ಬಿಲ್ ವಿದ್ಯುನ್ಮ೦ಡಲಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಕೋಟ್ಯಾ೦ತರ ರೂ. ನಷ್ಟ ಉಂಟಾಗುತ್ತಿದ್ದು, ಅದನ್ನು ತಪ್ಪಿಸಲು ಈ ವ್ಯವಸ್ಥೆ ನೆರವಾಗಲಿದೆ. ಮಾತ್ರವಲ್ಲ ಮಂಡಳಿಗೆ ಸಮರ್ಪಕವಾದ ಆದಾಯ ಕೂಡ ಲಭಿಸಲಿದೆ ಮತ್ತು ಬಿಲ್ ಪಾವತಿಸಲು ಕಚೇರಿಯಲ್ಲಿ ಕ್ಯೂ ನಿಲ್ಲುವ ಸಮಸ್ಯೆಗೂ ಪರಿಹಾರ ಲಭಿಸಲಿದೆ.
ವಿದೇಶಗಳಲ್ಲಿ ಯಶಸ್ವಿಯಾದ ಈ ಯೋಜನೆ ಭಾರತದಲ್ಲೂ ಜಾರಿಗೆ ತರಲಾಗುತ್ತಿದ್ದು, ಕೇರಳದಲ್ಲಿ ಶೀಘ್ರ ಯೋಜನೆ ಜಾರಿಗೆ ಬರಲಿದೆ.







