ಬಜೆಟ್ ನಲ್ಲಿ ಯುವಜನರ ಪ್ರಶ್ನೆಗಳನ್ನು ಕಡೆಗಣಿಸಲಾಗಿದೆ: ಮುನೀರ್ ಕಾಟಿಪಳ್ಳ

ಮಂಗಳೂರು, ಫೆ. 16: ಸಿದ್ದರಾಮಯ್ಯ ಚುನಾವಣೆಯ ಹಿನ್ನಲೆಯಲ್ಲಿ ಒಂದಿಷ್ಟು ಜನಪ್ರಿಯ ಘೋಷಣೆಗಳನ್ನು ಕೊಟ್ಟಿದ್ದಾರೆ. ಆದೇ ಸಂದರ್ಭ ಎಂದಿನಂತೆ ಯುವಜನರ ಪ್ರಶ್ನೆಗಳನ್ನು ಕಡೆಗಣಿಸಿದ್ದಾರೆ. ಸರಕಾರದಲ್ಲಿ ಖಾಲಿ ಬಿದ್ದಿರುವ ಎರಡು ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿಗೊಳಿಸುವುದು, ಉದ್ಯೋಗ, ಸ್ವದ್ಯೋಗಗಳನ್ನು ಸೃಷ್ಟಿಸುವ ಯೋಜನೆಗಳು ಬಜೆಟ್‌ನಲ್ಲಿ ಇಲ್ಲ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರತಿಕ್ರಿಯೆ ನೀಡಿದ್ದಾರೆ.
ಕರಾವಳಿ ಜಿಲ್ಲೆಯ ಸಮಸ್ಯೆಗಳನ್ನು ಪೂರ್ಣವಾಗಿ ಕಡೆಗಣಿಸಲಾಗಿದೆ. ಗಲ್ಫ್ ಬಿಕ್ಕಟ್ಟಿನಿಂದ ಉದ್ಯೋಗವಂಚಿತರಾಗಿ ಹಿಂದಿರುಗುತ್ತಿರುವ ಸಂತ್ರಸ್ತರಿಗೆ ಪುನರ್ವಸತಿ ಪ್ಯಾಕೇಜ್‌ನ ನಿರೀಕ್ಷೆ ಹುಸಿಯಾಗಿದೆ. ಉನ್ನತ ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ಇಲ್ಲಿನ ಯುವಜನರ ಪಾಲಿಗೆ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದೆ. ಬಿಕ್ಕಟ್ಟಿನಲ್ಲಿರುವ ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗದ ಪ್ರಸ್ತಾಪವೂ ಇಲ್ಲ. ಕನಿಷ್ಠ ಪ್ರವಾಸೋದ್ಯಮದ ಮೂಲಕವಾದರೂ ಒಂದಿಷ್ಟು ಉದ್ಯೋಗ ಸೃಷ್ಟಿಸುವ ಅವಕಾಶಗಳು ಕರಾವಳಿಯಲ್ಲಿತ್ತು. ಅವುಗಳನ್ನು ಕಡೆಗಣಿಸಲಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





