ನಿರಾಶಾದಾಯಕ ಬಜೆಟ್: ಸಿಪಿಎಂ
ಮಂಗಳೂರು, ಫೆ. 16: ಮುಂದಿನ ಚುನಾವಣೆಯ ದೃಷ್ಟಿಯಿಂದ ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಅವರು ಬಜೆಟ್‌ನ್ನು ಮಂಡಿಸಿದ್ದಾರೆ. ಬೇರೆ ಬೇರೆ ಇಲಾಖೆಗಳಿಗೆ ಚುನಾವಣಾ ಗಿಮಿಕ್ ಆಗಿ ಅನುದಾನ ನೀಡಿದ್ದಾರೆ. ಆದರೆ ರಾಜ್ಯದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಕೋನ ಈ ಬಜೆಟ್‌ನಲ್ಲಿ ಕಂಡು ಬರುತ್ತಿಲ್ಲ ಎಂದು ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ತಿಳಿಸಿದ್ದಾರೆ.
ಇಷ್ಟೊಂದು ಪ್ರಮಾಣದಲ್ಲಿ ಘೋಷಣೆಯಾದ ಅನುದಾನಗಳಿಗೆ ಎಲ್ಲಿಂದ ಹಣ ಒಟ್ಟು ಮಾಡುವ ಕುರಿತು ಯಾವುದೇ ಪ್ರಸ್ತಾಪವೂ ಈ ಬಜೆಟ್‌ನಲ್ಲಿ ಕಂಡು ಬರುತ್ತಿಲ್ಲ. ಅಕ್ಷರ ದಾಸೋಹ ಕಾರ್ಮಿಕರು ಸೇರಿಕೊಂಡು ಲಕ್ಷಾಂತರ ಸಂಖ್ಯೆಯಲ್ಲಿರುವ ಕಾರ್ಮಿಕ ಸಮುದಾಯದ ಪರ ಯಾವುದೇ ಆಶಾ ಭಾವನೆ ಇಲ್ಲದಾಗಿದೆ. ಬಜೆಟ್ ಪೂರ್ವದಲ್ಲಿ ರಾತ್ರಿ ಹಗಲು ಹೋರಾಟ ನಡೆಸಿ ತಮ್ಮ ಜುಜುಬಿ ಗೌರವ ಧನವನ್ನು ರೂ.5000ಕ್ಕೆ ಏರಿಸಬೇಕೆಂದು ಒತ್ತಾಯಿಸಿದ ಅಕ್ಷರದಾಸೋಹ ನೌಕರರ ಗೌರವ ಧನವನ್ನು ಸಿದ್ದರಾಮಯ್ಯ ಸರಕಾರ ಏರಿಸಬೇಕು. ವಿಧವಾ ವೇತನ, ವೃದ್ಧಾಪ್ಯ ವೇತನ ಇತ್ಯಾದಿಗೆ ಬರೀ ನೂರು ರೂಪಾುಯಷ್ಟೇ ಮಾಸಿಕವಾಗಿ ಏರಿಕೆ ಮಾಡಿದ್ದಾರೆ. ಮೃತ ರೈತರ 1ಲಕ್ಷದವರೆಗಿನ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ. ರೈತರಿಗೆ ಶೇ. 3 ಬಡ್ಡಿದರದಲ್ಲಿ 10 ಲಕ್ಷದ ವರೆಗೆ ಸಾಲ ಪಡೆಯುವ ಯೋಜನೆ ಘೋಷಣೆ ಮಾಡಿದ್ದಾರೆ. ವಿದ್ಯಾರ್ಥಿಗಳ ಬಸ್ ಪಾಸ್ ಸಂಪೂರ್ಣ ಉಚಿತವಾಗಿಸಿದ್ದಾರೆ. ವಿದ್ಯಾರ್ಥಿನಿಯರ ಶಿಕ್ಷಣ ಶುಲ್ಕ ಸಂಪೂರ್ಣ ವಿನಾಯಿತಿಗೊಳಿಸಿದ್ದಾರೆ ಇವೆಲ್ಲಾ ಸಕಾರಾತ್ಮಕ ಹೆಜ್ಜೆ ಇದ್ದರೂ, ಲಕ್ಷಾಂತರ ಸಂಖ್ಯೆಯ ಯುವಜನರಿಗೆ ಉದ್ಯೋಗ ಕಲ್ಪಿಸುವ ಆಶಾ ಭಾವನೆ ಈ ಬಜೆಟ್‌ನಲ್ಲಿ ಕಾಣುತ್ತಿಲ್ಲ ಎಂದವರು ಹೇಳಿದ್ದಾರೆ.
ಕೈಗಾರಿಕಾ ರಂಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಸಾರ್ವಜನಿಕ ಕಟ್ಟಡಗಳಲ್ಲಿ ಮಹಿಳಾ ಶೌಚಾಲಯಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆ ಗಳಲ್ಲಿ ಸಿಸಿ ಕೆಮರಾ ಅಳವಡಿಸುವ ತೀರ್ಮಾನಗಳು ರಕ್ಷಣಾ ದೃಷ್ಟಿಯಿಂದ ಸ್ವಾಗತಾರ್ಹವಾಗಿದೆ. ದ.ಕ. ಜಿಲ್ಲೆಯ ಮಟ್ಟಿಗೆ ಸಿದ್ದರಾಮಯ್ಯರವರ ಬಜೆಟ್ ನಿರಾಶದಾಯಕವಾಗಿದೆ. ಒಟ್ಟಾರೆಯಾಗಿ ರಾಜ್ಯದ ಜನತೆಗೆ ಹೊಸ ಚೈತನ್ಯವನ್ನು ಈ ಬಜೆಟ್ ನೀಡುವುದಿಲ್ಲವೆಂದು ವಸಂತ ಆಚಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.





