ನೀರವ್ ಮೋದಿಯ 29 ಸೊತ್ತು, 105 ಖಾತೆ ಮುಟ್ಟುಗೋಲು
ಹೊಸದಿಲ್ಲಿ/ಮುಂಬೈ, ಫೆ. 17: ತೆರಿಗೆ ವಂಚನೆಯ ಆರೋಪದ ತನಿಖೆಯ ಒಂದು ಭಾಗವಾಗಿ ನೀರವ್ ಮೋದಿ, ಅವರ ಕುಟುಂಬ ಹಾಗೂ ಕಂಪೆನಿಗೆ ಸೇರಿದ 29 ಸೊತ್ತು, 105 ಬ್ಯಾಂಕ್ ಖಾತೆಯನ್ನು ಆದಾಯ ತೆರಿಗೆ ಇಲಾಖೆ ತಾತ್ಕಾಲಿಕ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ವಜ್ರೋದ್ಯಮಿ ನೀರವ್ ಮೋದಿ ಮತ್ತೊಂದು ಸಂಕಷ್ಟಕ್ಕೆ ಸಿಲುಕಿ ದ್ದಾರೆ. ವಿದೇಶದಲ್ಲಿ ಅಕ್ರಮ ಸೊತ್ತು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಕೂಡ ಅವರ ವಿರುದ್ಧ ಕಪ್ಪು ಹಣ ತಡೆ ಕಾಯ್ದೆ ಅಡಿ ಆದಾಯ ತೆರಿಗೆ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.
ನೀರವ್ ಮೋದಿಯ ಸೊತ್ತು ಸಿಂಗಾಪುರದಲ್ಲಿದೆ. ಇತ್ತೀಚೆಗೆ ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ತನಿಖೆ ನಡೆಸಲಾಗಿತ್ತು. ಆ ಬಳಿಕ ವಿದೇಶಗಳಲ್ಲಿರುವ ಅಕ್ರಮ ಆಸ್ತಿಗಳ ಬಗ್ಗೆ ಕಪ್ಪು ಹಣ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಹೊಸ ಕಾಯ್ದೆ ಪ್ರಕಾರ ಬಹಿರಂಗಪಡಿಸದ ವಿದೇಶಿ ಸೊತ್ತು ಹಾಗೂ ಆದಾಯಕ್ಕೆ ಸಂಬಂಧಿಸಿ 10 ವರ್ಷ ಜೈಲು ಶಿಕ್ಷೆಯಲ್ಲದೆ, ಶೇ. 120 ತೆರಿಗೆ ಹಾಗೂ ದಂಡ ಹಾಕುವ ಅವಕಾಶ ಇದೆ. ಆದಾಯ ತೆರಿಗೆ ಇಲಾಖೆ ಮೋದಿ ವಿರುದ್ಧ ಆದಾಯ ತೆರಿಗೆ ಕಾಯ್ದೆಯ ವಿವಿಧ ಕಲಮುಗಳ ಅಡಿಯಲ್ಲಿ ಮುಂಬೈ ವಿಶೇಷ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಿಸಿದೆ. ಫೆಬ್ರವರಿ 27ರಂದು ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಲಿದೆ. ನೀರವ್ ಮೋದಿ, ಅವರ ಪತ್ನಿ ಆಮಿ ಅವರ ಸ್ಥಿರ ಸೊತ್ತು ಹಾಗೂ ಮುಂಬೈ, ಸೂರತ್, ಜೈಪುರ ಹಾಗೂ ಹೊಸದಿಲ್ಲಿಯಲ್ಲಿರುವ ಕಂಪೆನಿಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸು ಹಚ್ಚಿದ್ದಾರೆ. ನೀರವ್ ಮೋದಿ, ಅವರ ಕುಟುಂಬ ಹಾಗೂ ಕಂಪೆನಿಗಳ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಆದಾಯ ಅಂದಾಜಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಅದು ಪೂರ್ಣಗೊಂಡ ಬಳಿಕ ಅವರು ದೊಡ್ಡ ಮೊತ್ತದ ಆದಾಯ ತೆರಿಗೆ ಸಲ್ಲಿಸಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಸೊತ್ತು, ಖಾತೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.