ಉಡುಪಿ: ಅಖಿಲ ಭಾರತ ಅಂತರ ವಿವಿ ಮಹಿಳಾ ನೆಟ್‌ಬಾಲ್
ಫೆ.20ರಿಂದ 23ರವರೆಗೆ
ಉಡುಪಿ, ಫೆ.17: ನಗರದ ಪೂರ್ಣಪ್ರಜ್ಞ ಕಾಲೇಜು, ಮಂಗಳೂರು ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಅಖಿಲ ಭಾರತ ಮಟ್ಟದ ಅಂತರ್ ವಿಶ್ವವಿದ್ಯಾಲಯ ಮಹಿಳಾ ನೆಟ್‌ಬಾಲ್ ಟೂರ್ನಿಯನ್ನು ಫೆ.20ರಿಂದ 23 ರವರೆಗೆ ಪೂರ್ಣಪ್ರಜ್ಞ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥರು ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಡುಪಿಯಲ್ಲಿ ಮೊದಲ ಬಾರಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಈ ಪಂದ್ಯಾಟದಲ್ಲಿ ದೇಶದ ವಿವಿಧ ರಾಜ್ಯಗಳ 60ಕ್ಕೂ ಅಧಿಕ ವಿವಿಗಳ ಮಹಿಳಾ ತಂಡಗಳು ಭಾಗವಹಿಸಲಿವೆ ಎಂದರು. ಒಂದು ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿ ದ್ದಾರೆ ಎಂದರು.
ದೇಶದ 120 ಕ್ರೀಡಾ ತರಬೇತಿದಾರರು ತಂಡಗಳೊಂದಿಗೆ ಬರಲಿದ್ದು 60 ಅಧಿಕಾರಿಗಳು ಜೊತೆಯಾಗಲಿದ್ದಾರೆ. ನೆಟ್‌ಬಾಲ್ ಸ್ಪರ್ಧೆಗಳು ಹೊನಲು ಬೆಳಕಿನಲ್ಲಿ ನಡೆಯಲಿದ್ದು, ಇದಕ್ಕಾಗಿ ಹೊನಲು ಬೆಳಕಿನ ಕ್ರೀಡಾಂಗಣವನ್ನು ಸಜ್ಜುಗೊಳಿಸಲಾಗಿದೆ. ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯಿದೆ ಎಂದರು.
ಟೂರ್ನಿಯ ಉದ್ಘಾಟನೆ ಫೆ.20ರಂದು ಬೆಳಗ್ಗೆ 9:45ಕ್ಕೆ ನಡೆಯಲಿದೆ. ಕಾಲೇಜಿನ ಕ್ರೀಡಾಂಗಣದಲ್ಲಿ ಪಂದ್ಯಾಟದ ಉದ್ಘಾಟನೆ ನಡೆಯಲಿದೆ. ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಮಂಗಳೂರು ವಿ.ವಿ.ಯ ಕುಲಪತಿ ಪ್ರೊ.ಕೆ.ಭೈರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಅರ್ಜುನ ಪ್ರಶಸ್ತಿ ಪುರಸ್ಕೃತೆ ವಿಕಲಚೇತನ ಕ್ರೀಡಾಪಟು ಮಾಲತಿ ಕೆ.ಹೊಳ್ಳ, ಉದ್ಯಮಿ ಯು.ಬಿ.ಶೆಟ್ಟಿ ಭಾಗವಹಿಸಲಿದ್ದಾರೆ.
ಫೆ.22 ರಂದು ಪ್ರಜ್ಞಾ ಗೌರವ: ಪೂರ್ಣಪ್ರಜ್ಞ ಸಂಸ್ಥೆ ಆರಂಭದಿಂದ ಪ್ರಸ್ತುತ ಕಲಿಯುತ್ತಿರುವ ವಿದ್ಯಾರ್ಥಿಗಳ ಪೈಕಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ 35 ವಿದ್ಯಾರ್ಥಿಗಳಿಗೆ ೆ.22ರ ಸಂಜೆ 5:30ಕ್ಕೆ ಪ್ರಜ್ಞಾ ಗೌರವ ಪ್ರದಾನ ಮಾಡಲಾಗುವುದು. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ, ನಂದಿನಿ ಗ್ರೂಪ್ ಆ್ ಹೋಟೆಲ್‌ನ ಮಾಲಕ ನೇರಂಬಳ್ಳಿ ರಾಘವೇಂದ್ರ ರಾವ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಬಿ.ಎಂ. ಸೋಮಯಾಜಿ ಭಾಗವಹಿಸಲಿದ್ದಾರೆ.
ಟೂರ್ನಿಯ ಸಮಾರೋಪ ಹಾಗೂ ಬಹುಮಾನ ವಿತರಣೆ ಫೆ.23ರ ಶುಕ್ರವಾರ ಅಪರಾಹ್ನ 3 ಗಂಟೆಗೆ ನಡೆಯಲಿದ್ದು, ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಶ್ರೀಪಾದರುಆಶೀರ್ವಚನ ನೀಡಲಿದ್ದಾರೆ. ಮಂಗಳೂರು ವಿವಿಯ ಪ್ರೊ.ಬಿ.ಎಸ್. ನಾಗಪ್ರಸಾದ್, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿಜಯ ಭಾರದ್ವಾಜ್ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಗೌರವ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್, ಗೌರವ ಕೋಶಾಧಿಕಾರಿ ಪ್ರದೀಪ್ ಕುಮಾರ್, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ., ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್, ಎಂಬಿಎ ನಿರ್ದೇಶಕ ಡಾ.ಭರತ್, ಡಾ.ಶ್ರೀಕಾಂತ್ ರಾವ್ ಸಿದ್ಧಾಪುರ ಉಪಸ್ಥಿತರಿದ್ದರು.







