ವೀರಶೈವ ಮತ್ತು ಲಿಂಗಾಯತ ಎಂಬ ಭೇದಭಾವ ಬೇಡ: ಸಿದ್ದಲಿಂಗ ಶಿವಾಚಾರ್ಯ ಶ್ರೀ

ದಾವಣಗೆರೆ,ಫೆ.18: ವೀರಶೈವ ಮತ್ತು ಲಿಂಗಾಯತ ಎಂಬ ಬೇಧಭಾವ ಮಾಡದೇ ಎಲ್ಲರೂ ಎರಡೂ ಒಂದೇ ಎಂಬ ಭಾವನೆ ಬೆಳೆಸಿಕೊಳ್ಳಬೇಕೆಂದು ತಾವರಕೆರೆ ಶಿಲಾಮಠದ ಡಾ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಶ್ರೀಗಳು ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ವಿಶ್ವ ವೀರಶೈವ ಲಿಂಗಾಯತ ಏಕೀಕರಣ ಪರಿಷತ್, ವಿಶ್ವ ಕಲ್ಯಾಣ, ಪರಿಸರ, ಗ್ರಾಹಕ, ಸಂಸ್ಕೃತಿ ಪರಿಷತ್, ಸಮಗ್ರ ಸಾಹಿತ್ಯ ವೇದಿಕೆ ವತಿಯಿಂದ ಏರ್ಪಡಿಸಿದ್ದ ಶ್ರೀರೇಣುಕರ ಯುವಮಾನೋತ್ಸವ, ವೀರಶೈವ ಲಿಂಗಾಯತ ಧರ್ಮ ಚಿಂತನೆ, ಶ್ರೀ ಡಾ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಗಳವರಿಗೆ, ಡಾಕ್ಟರೇಟ್ ಗೌರವ ಸಂದ ಸಂದರ್ಭ ಗೌರವ ಸಮರ್ಪಣೆ ಹಾಗೂ ಕರ್ನಾಟಕ ಗಾಂಧಿ ಶರಣ ಹರ್ಡೆಕರ್ ಮಂಜಪ್ಪನವರ ಜಯಂತಿ ಕವಿಗೋಷ್ಟಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಲಿಂಗಾಯತರಲ್ಲಿ ಹೊಸ ಅಲೆ ಉಂಟಾಗಿದ್ದರೂ ಬಸವಣ್ಣನವರು ಎಲ್ಲಾ ಜನಾಂಗದವರನ್ನು ಒಂದುಗೂಡಿಸಿ ಅನುಭವ ಮಂಟಪಕ್ಕೆ ಕರೆಯಿಸಿ ಎಲ್ಲರು ಕೂಡ ಧರ್ಮದ ಭೋಧನೆ ಮಾಡಿದ್ದರು. ಬೇರೆ ಯಾವುದಾರರು ಧರ್ಮದಲ್ಲಿ ಇಂತಹ ಪದ ಬಳಕೆಯಾಗಿದ್ದರೆ ಅದು ದಮನವಾಗುತ್ತಿತ್ತು. ಆದರೆ, ವೀರಶೈವರು ಶಾಂತಿಪ್ರಿಯರು ಎಂಬುದಕ್ಕೆ ನಾವೆಲ್ಲರೂ ಸಾಕ್ಷಿ ಎಂದರು.
ಬಸವಾದಿ ಶಿವಶರಣರ ವಚನದಲ್ಲಿ ಲಿಂಗಾಯತ ಮತ್ತು ವೀರಶೈವ ಪದ ಎಷ್ಟು ಕಡೆ ಬಂದಿದೆ ಎಂಬುದನ್ನು ನಾವು ಗಮನಿಸಬೇಕಾಗಿದೆ. ಬಸವಣ್ಣನವರ ಇಡೀ ಸಮಗ್ರ ವಚನದಲ್ಲಿ ಹುಡುಕಿದರು ಸಹ ಲಿಂಗಾಯತ ಎಂಬ ಪದ ಬಳಸಿಲ್ಲ. ಬಸವಣ್ಣನವರ ಪ್ರತಿರೂಪವಾಗಿಟ್ಟುಕೊಂಡು ಲಿಂಗಾಯತ ಎಂಬ ಶಬ್ದವನ್ನು ಹುಡುಕಿಕೊಂಡು ಹೋದರೆ ಧರ್ಮದ್ರೋಹ ಮಾಡಿದಂತಾಗುತ್ತದೆ. ಅಧಿಕೃತವಾಗಿ ಸರ್ಕಾರದಿಂದಲೇ ಸಮಗ್ರ ಸಾಹಿತ್ಯ ವಚನ ಬಿಡುಗಡೆ ಮಾಡಿದ್ದಾರೆ. ಅದೇ ವಚನ ಸಂಪುಟಗಳನ್ನು ಸಹ ಆನ್‍ಲೈನ್ ಗಳಲ್ಲಿ ಲಭ್ಯವಿದೆ. ಹಾಗಾಗಿ, ವೀರಶೈವ ಲಿಂಗಾಯತರೆಂಬ ಭೇದ ಭಾವವಿರದೆ ಒಂದೇ ಎಂಬ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
221 ಕಡೆ 30 ವಚನಕಾರರು 142 ವಚನಗಳಲ್ಲಿ ವೀರಶೈವ ಎಂಬ ಪದವನ್ನು ಬಳಕೆ ಮಾಡಿದ್ದಾರೆ. 8 ಶರಣರು 13 ಕಡೆ ಲಿಂಗಾಯತ ಎಂಬ ಪದವನ್ನು ಬಳಕೆ ಮಾಡಿಕೊಂಡಿದ್ದಾರೆ. ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರು ಜಾಗೃತರಾಗಬೇಕಾಗಿದೆ ಎಂದು ಹೇಳಿದರು.
ಸಮಗ್ರ ಸಾಹಿತ್ಯ ವೇದಿಕೆಯ ಅಧ್ಯಕ್ಷ ರೇವಣ್ಣ ಬಳ್ಳಾರಿ, ವಿಶ್ರಾಂತ ಪ್ರಾಚಾರ್ಯ ಪ್ರೊ.ಹೆಚ್.ಟಿ.ಶಂಕರ್ ಮೂರ್ತಿ, ನ್ಯಾ,ಎಸ್.ಹೆಚ್.ವಿನಯ್ ಕುಮಾರ್ ಸಾಹುಕಾರ್, ಎಸ್.ಎಂ.ಹಿರೇಮಠ್, ವೈ.ಬಿ.ಸತೀಶ್, ಜಗನ್ನಾಥ್, ಜ್ಯೋತಿ ಲಕ್ಷ್ಮಿ, ಸಿ.ಕೆ.ಗೀತಾ ಮತ್ತಿತರರಿದ್ದರು.







