800 ಕೋ. ರೂ. ಸಾಲ ಪಡೆದು ವಂಚಿಸಿದ ರೊಟೋಮ್ಯಾಕ್ ಪೆನ್ ಕಂಪೆನಿ
ಮತ್ತೊಂದು ಬ್ಯಾಂಕ್ ವಂಚನೆ ?

ಕಾನ್ಪುರ, ಫೆ. 18: ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ 11,360 ಕೋ. ರೂ. ವಂಚನೆ ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ಇಂತಹದ್ದೇ ಇನ್ನೊಂದು ವಂಚನೆ ಬಹಿರಂಗವಾಗಿದೆ. ರೊಟೋಮ್ಯಾಕ್ ಪೆನ್ ಕಂಪೆನಿ ಮಾಲಕ ದೇಶದ ವಿವಿಧ ಸಾರ್ವಜನಿಕ ರಂಗದ ಬ್ಯಾಂಕ್‌ಗಳಿಂದ 800 ಕೋ. ರೂ.ಗೂ ಅಧಿಕ ಸಾಲ ಪಡೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕಂಪೆನಿಯ ಮಾಲಕ ವಿಕ್ರಮ್ ಕೊಠ್ಠಾರಿ ಸಾರ್ವಜನಿಕ ರಂಗದ ಬ್ಯಾಂಕ್‌ಗಳಿಂದ 800 ಕೋ. ರೂ.ಗೂ ಅಧಿಕ ಸಾಲ ಪಡೆದು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೊಠ್ಠಾರಿಗೆ ಈ ಸಾಲ ನೀಡಲು ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ತಮ್ಮ ನಿಯಮಗಳನ್ನು ಸಡಿಲಗೊಳಿಸಿವೆ ಎಂದು ಮೂಲಗಳು ದೃಢಪಡಿಸಿವೆ. ಕೊಠ್ಠಾರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ 485 ಕೋ. ರೂ. ಹಾಗೂ ಅಲಹಾಬಾದ್ ಬ್ಯಾಂಕ್‌ನಿಂದ 352 ಕೋ. ರೂ. ಸಾಲ ಪಡೆದಿದ್ದರು. ವರ್ಷಗಳ ಬಳಿಕ ಕೊಠ್ಠಾರಿ ಸಾಲದ ಮೊತ್ತ ಅಥವಾ ಬಡ್ಡಿ ಕಟ್ಟದೇ ಇರುವುದು ಬೆಳಕಿಗೆ ಬಂತು.
ಈ ನಡುವೆ ಅಲಹಾಬಾದ್‌ನ ಮ್ಯಾನೇಜರ್ ರಾಜೇಶ್ ಗುಪ್ತಾ, ಕೊಟ್ಠಾರಿಯ ಸೊತ್ತು ಮಾರಿ ಸಾಲ ಮರಳಿ ಪಡೆಯಲಾಗುವುದು ಎಂದು ಹೇಳಿದ್ದಾರೆ.
ಕೊಟ್ಠಾರಿ ಕಚೇರಿಗೆ ಬೀಗ
ಕಾನ್ಪುರ ಸಿಟಿ ಸೆಂಟರ್ ರಸ್ತೆಯಲ್ಲಿರುವ ಕೊಠ್ಠಾರಿ ಕಚೇರಿಯನ್ನು ಕಳೆದ ಒಂದು ವಾರಗಳಿಂದ ಲಾಕ್ ಮಾಡಲಾಗಿದೆ. ಕೊಠ್ಠಾರಿ ಕೂಡ ಎಲ್ಲಿದ್ದಾರೆ ಎಂಬುದು ಇದುವರೆಗೆ ತಿಳಿದುಬಂದಿಲ್ಲ.





