ಅತ್ಯಾಚಾರ ಆರೋಪ: ಚಾನೆಲ್ ಮುಖ್ಯ ಸಂಪಾದಕನ ಬಂಧನ

ಹೊಸದಿಲ್ಲಿ, ಫೆ. 18: ಮಹಿಳಾ ಉದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಹಿಂದಿ ಚಾನೆಲ್ ಒಂದರ ಮುಖ್ಯ ಸಂಪಾದಕನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 13ರಂದು ಸಂತ್ರಸ್ತೆ ದಿಲ್ಲಿಯ ತುಘ್ಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜೆನೆಟಿಕ್ಸ್ ಜಿಮ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ತಾನು ಇಂದಿರಾಪುರದಲ್ಲಿ ವಾಸಿಸುತ್ತಿದ್ದೆ. ಆಗ ತನಗೆ ಹಿಂದಿ ಸುದ್ದಿ ವಾಹಿನಿಯ ಮುಖ್ಯ ಸಂಪಾದಕ ಉಮೇಶ್ ಕುಮಾರ್ ಅವರ ಪರಿಚಯವಾಯಿತು ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ತನ್ನನ್ನು ಅವರು ನಿವಾಸಕ್ಕೆ ಕರೆಸಿಕೊಂಡರು. ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದರು. ಆಗಸ್ಟ್‌ನಲ್ಲಿ ಕ್ಲಾರಿಡ್ಜಸ್ ಹೊಟೇಲ್‌ಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದರು. ಆ ಬಳಿಕ ಉಮೇಶ್ ವಿವಾಹಿತ ಎಂಬುದು ಗೊತ್ತಾಯಿತು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಉಮೇಶ್ ತಮ್ಮ ಹೆಸರಿನಲ್ಲಿ ಕೊಠಡಿ ಕಾಯ್ದಿರಿಸಿರುವುದು ಹಾಗೂ ಅಲ್ಲಿ ಆರೋಪಿ ಇದ್ದುದನ್ನು ಹೊಟೇಲ್‌ನ ಅಧಿಕಾರಿಗಳು ದೃಢಪಡಿಸಿದ್ದಾರೆ.





