ಕ್ಯಾಂಪಸ್ ಸುನ್ನಿ ಸ್ಟೂಡೆಂಟ್ಸ್‌ನಿಂದ ಮಾದಕ ದ್ರವ್ಯ ವಿರುದ್ಧ ಜನಜಾಗೃತಿ

ಮಂಗಳೂರು, ಫೆ. 18: ಕ್ಯಾಂಪಸ್ ಸುನ್ನೀ ಸ್ಟೂಡೆಂಟ್ಸ್ ಬಜಾಲ್ ನಂತೂರ್ ಶಾಖೆ ವತಿಯಿಂದ ಮಾದಕ ದ್ರವ್ಯದ ವಿರುದ್ಧ ಪಡೀಲ್ ಜಂಕ್ಷನ್‌ನಿಂದ ಬಜಾಲ್ ನಂತೂರ್ ಜಂಕ್ಷನ್‌ವರೆಗೆ ಕಾಲ್ನಡಿಗೆ ಜಾಥಾ ಹಾಗೂ ಜನಜಾಗೃತಿ ಸಮಾವೇಶ ರವಿವಾರ ನಡೆಯಿತು.
ಬಜಾಲ್ ನಂತೂರ್ ಜಂಕ್ಷನ್‌ನಲ್ಲಿ ನಡೆದ ಜನಜಾಗೃತಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ನಗರದ ನ್ಯಾಷನಲ್ ಟ್ಯುಟೋರಿಯಲ್‌ನ ಪ್ರಾಂಶುಪಾಲ ಯು.ಎಚ್.ಖಾಲಿದ್ ಅವರು, ಯುವಕರು ಹಾಗೂ ವಿದ್ಯಾರ್ಥಿಗಳು ಮಾದಕ ದ್ರವ್ಯಕ್ಕೆ ಬಲಿಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ವಿವರಿಸಿದ ಅವರು, ಇಂತಹ ದುಷ್ಚಟಗಳಿಗೆ ಬಲಿಯಾಗದಂತೆ ಮನವಿ ಮಾಡಿದರು.
ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನಾ ಸ್ಥಾಯಿ ಸಮಿತಿಯ ಅಧ್ಯಕ್ಷ ಅಬ್ದುಲ್ ರವೂಫ್ ಮಾತನಾಡಿ, ಮಾದಕ ದ್ರವ್ಯಗಳಿಂದ ದೂರ ಇರುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರಲ್ಲದೆ, ಈ ಬಗ್ಗೆ ಹೆತ್ತರು ಕೂಡ ತಮ್ಮ ಮಕ್ಕಳ ಬಗ್ಗೆ ಜಾಗೃತರಾಗಬೇಕೆಂದರು.
ಖಿದ್ಮತುಲ್ ಇಸ್ಲಾಂ ಖುತ್‌ಬಿಯತ್ ಸಮಿತಿಯ ಅಧ್ಯಕ್ಷ ಕೆ.ಇ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಇಲ್ಯಾಸ್ ಅಮ್ಜದಿ ಸಮಾವೇಶವನ್ನು ಉದ್ಘಾಟಿಸಿದರು. ಮಸೀದಿಯ ಪ್ರಧಾನ ಕಾರ್ಯದರ್ಶಿ ನಝೀರ್ ಬಜಾಲ್, ಬಜಾಲ್ ನಂತೂರು ಹಯಾತುಲ್ ಇಸ್ಲಾಂ ಮದ್ರಸದ ಸದರ್ ಮುಅಲ್ಲಿಂ ಅಬೂಬಕರ್ ಮುಸ್ಲಿಯಾರ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಹನೀಫ್ ಬೈಕಂಪಾಡಿ, ಎಸೆಸೆಫ್ ಮಂಗಳೂರು ವಲಯ ಪ್ರಧಾನ ಕಾರ್ಯದರ್ಶಿ ನಾಸಿರ್ ಫಾಳಿಲಿ, ಎಸೆಸೆಫ್ ಬಜಾಲ್ ನಂತೂರ್ ಶಾಖೆಯ ಅಧ್ಯಕ್ಷ ಹಾರಿಸ್, ಇಬ್ರಾಹೀಂ ತೋಟ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಪಡೀಲ್‌ನ ಮಸ್ಜಿದುರ್ರಹ್ಮಾನ್ ಸುನ್ನೀ ಜಮಾಅತ್‌ನ ಖತೀಬ್ ಅನಸ್ ಅಹ್ಸನಿ ಅವರು ಪಡೀಲ್ ಜಂಕ್ಷನ್‌ನಲ್ಲಿ ದುವಾ ನೆರವೇರಿಸಿ ಕಾಲ್ನಡಿ ಜಾಥಾಕ್ಕೆ ಚಾಲನೆ ನೀಡಿದರು.
ಎಸ್ಸೆಸ್ಸೆಫ್ ಬಜಾಲ್ ನಂತೂರು ಶಾಖೆಯ ಉಪಾಧ್ಯಕ್ಷ ಶಾಫಿ ಮಿಸ್ಬಾಹಿ ಸ್ವಾಗತಿಸಿದರು. ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಇ.ಅಲ್ಫಾಝ್ ಹಮೀದ್ ವಂದಿಸಿದರು.







